ವಿಜಯಪುರ: ಕೆನಾಲ್ನಲ್ಲಿ ಈಜಲು ಹೋಗಿ ಬಾಲಕನೋರ್ವ ನೀರು ಪಾಲಾಗಿರುವ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮದಲ್ಲಿ ನಡೆದಿದೆ.
ರಾಜಕುಮಾರ ತಳವಾರ (12) ನೀರು ಪಾಲಾಗಿದ್ದ ಬಾಲಕ. ಜಿಲ್ಲೆಯ ಸಿಂದಗಿ ತಾಲೂಕಿನ ಬಂದಾಳ ಗ್ರಾಮದ ಕೆನಾಲ್ನಲ್ಲಿ ನಿನ್ನೆ ಬಾಲಕ ನೀರು ಪಾಲಾಗಿದ್ದ. ಇದುವರೆಗೂ ಬಾಲಕನ ಶವ ಪತ್ತೆಯಾಗದಿರುವುದು ಪಾಲಕರ ಆತಂಕಕ್ಕೆ ಕಾರಣವಾಗಿದೆ. ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ನಿನ್ನೆಯಿಂದ ಬಾಲಕನ ಮೃತದೇಹಕ್ಕೆ ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಬಾಲಕನ ಶವ ಪತ್ತೆಯಾಗಿಲ್ಲ.
ಹೀಗಾಗಿ ಬಾಲಕನ ಕುಟುಂಬದವರ ರೋಧನೆ ಮುಗಿಲು ಮುಟ್ಟಿದೆ. ಇಂದು ಕೆಬಿಜಿಎನ್ಎಲ್ ಅಧಿಕಾರಿ ರಮೇಶ ಚವ್ಹಾಣ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಜನ ನೀರು ಹರಿಸುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಅಧಿಕಾರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಮೃತ ಬಾಲಕನ ಅಜ್ಜಿ ಗೌರಾಬಾಯಿ ನೀರು ನಿಲ್ಲಿಸದೇ ಹೋದರೆ ತಾನು ಜಿಗಿದು ಪ್ರಾಣ ಬಿಡುವುದಾಗಿ ಹೇಳಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.