ವಿಜಯಪುರ: ಸಿದ್ದೇಶ್ವರ ಸ್ವಾಮೀಜಿಯ ಚಿತಾಭಸ್ಮವನ್ನು ಭಕ್ತರಿಗೆ ನೀಡಲಾಗುವುದಿಲ್ಲ ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ನಡೆದಾಡುವ ದೇವರು ಶ್ರೀ ಸಿದ್ದೇಶ್ವರರ ಚಿತಾಭಸ್ಮವನ್ನು ಭಕ್ತರಿಗೆ ನೀಡಲಾಗುತ್ತಿದೆ ಎಂದು ನಿನ್ನೆ ರಾತ್ರಿ ನಡೆದ ಅಂತ್ಯಕ್ರಿಯೆಯ ವೇಳೆ ಕನ್ಹೇರಿ ಮಠದ ಸ್ವಾಮೀಜಿ ಹೇಳಿದ್ದರು. ಅಲ್ಲದೇ ಚಿತಾಭಸ್ಮವನ್ನು ಯಾರೂ ನದಿ ಹಾಗೂ ಸಾಗರದಲ್ಲಿ ವಿಸರ್ಜನೆ ಮಾಡಲು ಇಚ್ಛೆಪಡುತ್ತಾರೋ ಅವರು ಹೆಸರು ನೋಂದಾಯಿಸುವಂತೆಯೂ ಕೂಡಾ ಹೇಳಿದ್ದರು. ಆದರೆ, ಯಾವುದೇ ಭಕ್ತರಿಗೆ ಶ್ರೀಗಳ ಚಿತಾಭಸ್ಮವನ್ನು ನೀಡುವುದಿಲ್ಲ ಎಂದು ಬಸವಲಿಂಗ ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ.
ಸಿದ್ದೇಶ್ವರ ಸ್ವಾಮೀಜಿಗಳ ಆಣತಿಯಂತೆ ನಾವು ಯಾವುದೇ ಚಿತಾಭಸ್ಮವನ್ನು ನೀಡಲ್ಲ. ಭಕ್ತರು ಬೇಕಾದರೆ ಹೊರಗಿನಿಂದ ವಿಭೂತಿ ತಂದು ಅಂತ್ಯಕ್ರಿಯೆ ನಡೆಸಿದ ಜಾಗದಲ್ಲಿಟ್ಟು ಅದನ್ನೇ ಭಸ್ಮವೆಂದು ಭಾವಿಸಿ ಒಯ್ಯಬೇಕು. ಚಿತಾಭಸ್ಮವನ್ನು ನದಿ ಮತ್ತು ಸಮುದ್ರದಲ್ಲಿ ವಿಸರ್ಜನೆ ಮಾಡಬೇಕೆಂಬುದರ ಕುರಿತು ಆಶ್ರಮದಲ್ಲಿರುವ ಸ್ವಾಮೀಜಿಗಳು ಸೇರಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಈ ಕುರಿತು ಕನ್ಹೇರಿ ಮಠದ ಶ್ರೀಗಳು ಹಾಗೂ ಸುತ್ತೂರು ಮಠದ ಶ್ರೀಗಳು ಸೇರಿದಂತೆ ಇತರ ಸ್ವಾಮೀಜಿಗಳ ಸಲಹೆಗಳನ್ನು ಈಗಾಗಲೇ ಪಡೆದುಕೊಳ್ಳಲಾಗಿದೆ.
ಸದ್ಯದಲ್ಲೇ ಒಂದು ಸಭೆ ನಡೆಸಲಾಗುವುದು. ಆ ಬಳಿಕ ಚಿತಾಭಸ್ಮ ವಿಸರ್ಜನೆಯ ಕುರಿತು ನಿರ್ಧಾರ ಮಾಡುತ್ತೇವೆ. ಮೂರು ದಿನಗಳ ನಂತರ ಅಂದರೆ ನಾಳೆ (ಗುರುವಾರ) ಸರಳ ವಿಧಿ ವಿಧಾನಗಳ ಆಚರಣೆಯ ಮೂಲಕ ಚಿತಾಭಸ್ಮ ವಿಸರ್ಜನೆಗೆ ಮುಂದಾಗುತ್ತೇವೆ ಎಂದು ಬಸವಲಿಂಗ ಸ್ವಾಮೀಜಿ ಹೇಳಿದ್ದಾರೆ.
ಶತಮಾನ ಕಂಡ ಜ್ಞಾನಯೋಗಿ ಇನ್ನಿಲ್ಲ ಎಂಬುದನ್ನು ಅರಗಿಸಿಕೊಳ್ಳಲಾಗದ ಭಕ್ತಗಣ ಇಂದು ಬೆಳ್ಳಂಬೆಳಗ್ಗೆಯೂ ಆಶ್ರಮಕ್ಕೆ ಬಂದು ಅವರ ಚಿತೆಯಿರುವ ಜಾಗಕ್ಕೆ ನಮಸ್ಕರಿಸಿ ತೆರಳುತ್ತಿದ್ದರು. ಶ್ರೀಗಳ ಅಗ್ನಿಸ್ಪರ್ಶ ಜಾಗಕ್ಕೆ ಪೂಜೆ ಸಲ್ಲಿಸಿ ಮನಪೂರ್ವಕ ಭಕ್ತಿ ಅರ್ಪಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ನಿರ್ಮೋಹಿಯಾಗಿದ್ದ ಸಿದ್ದೇಶ್ವರ ಸ್ವಾಮೀಜಿ ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಚೇತರಿಕೆಗಾಗಿ ನಾಡಿನ ಜನತೆ ವಿಶೇಷ ಪೂಜೆ, ಹೋಮ, ಹವನಗಳನ್ನು ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಿದ್ದರು. ಆದರೆ, ಸೋಮವಾರ ಸಂಜೆ 6.05 ನಿಮಿಷಕ್ಕೆ ಸ್ವಾಮೀಜಿ ಕೊನೆಯುಸಿರೆಳೆದಿದ್ದು, ಭಕ್ತಸಾಗರ ಶೋಕಸಾಗರದಲ್ಲಿ ಮುಳುಗಿದೆ.
ನಾಡಿನ ಪ್ರಸಿದ್ಧ ಆಧ್ಯಾತ್ಮಿಕ ಚಿಂತಕ, ಪ್ರವಚನಕಾರರಾಗಿದ್ದ ಶ್ರೀಗಳ ಮೃತದೇಹದ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ ರಾತ್ರಿ ನೆರವೇರಿಲಾಗಿದೆ. ರಾಜ್ಯ ಸರ್ಕಾರದಿಂದಲೇ ಎಲ್ಲಾ ವಿಧಿ ವಿಧಾನಗಳನ್ನು ನೆರವೇರಿಸಲಾಗಿದೆ. ಅಂತಿಮವಾಗಿ ವಿಜಯಪುರದ ಜ್ಞಾನಯೋಗಾಶ್ರಮದ ಸಂತನಿಗೆ ಅಗ್ನಿಸ್ಪರ್ಶ ಮಾಡಲಾಯಿತು. ಈ ಮೂಲಕ ದೇಶದ ಆಧ್ಯಾತ್ಮಿಕ ಚಿಂತಕರರೊಬ್ಬರು ಪಂಚಭೂತಗಳಲ್ಲಿ ಲೀನರಾದರು. ಶ್ರೀಗಳ ಅಗಲಿಕೆಯ ಗೌರವಾರ್ಥ ವಿಜಯಪುರ ಜಿಲ್ಲೆಯ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ ಸಹ ಘೋಷಿಸಲಾಗಿತ್ತು.
ಇದನ್ನೂ ಓದಿ: ಶ್ರೀ ಸಮ್ಮೇದ್ ಶಿಖರ್ಜಿಗಾಗಿ ಜಾರ್ಖಂಡ್ ಸರ್ಕಾರದ ವಿರುದ್ಧ ಉಪವಾಸ ಕುಳಿತ ಜೈನ ಸನ್ಯಾಸಿ ನಿಧನ