ಮುದ್ದೇಬಿಹಾಳ : ಕೇಂದ್ರ ಸರ್ಕಾರ ತಳವಾರ ಸಮಾಜವನ್ನು ಪರಿಶಿಷ್ಟ ಪಂಗಡ(ಎಸ್ಟಿ)ಕ್ಕೆ ಸೇರಿಸಿದ್ದಾಗಿ ಆದೇಶ ಹೊರಡಿಸಿದ್ದರೂ ಕೂಡ ರಾಜ್ಯ ಸರ್ಕಾರ ಮಾತ್ರ ತಳವಾರ ಜಾತಿಗೆ ಎಸ್ಟಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕುತ್ತಿದೆ ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಆರೋಪಿಸಿದರು.
ತಳವಾರ ಸಮುದಾಯಕ್ಕೆ ಎಸ್ಟಿ ಪ್ರಮಾಣ ಪತ್ರ ನೀಡುವ ಸಂಬಂಧ ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳಲಿರುವ ಹೋರಾಟದ ಕುರಿತಾಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಮಾಜಿ ಶಾಸಕ ಶರಣಪ್ಪ ಸುಣಗಾರ ಮಾತನಾಡಿ, ವಾಲ್ಮೀಕಿ ಸಮುದಾಯದ ಜಗದ್ಗುರುಗಳು ಸೇರಿ 19 ಶಾಸಕರನ್ನು ನಾನು ಭೇಟಿ ಮಾಡಿದ್ದೇನೆ.
ಸಚಿವ ಶ್ರೀರಾಮುಲು ಅವರಿಗೂ ಈ ಸಮಸ್ಯೆಯ ಬಗ್ಗೆ ತಿಳಿಸಿದ್ದೇನೆ. ಆದರೆ, ಕಾಣದ ಕೈಗಳು ಪ್ರಮಾಣ ಪತ್ರ ಸಿಗದಂತೆ ಹುನ್ನಾರ ನಡೆಸಿವೆ. ಅವರ ಮೇಲೂ ಒತ್ತಡ ಹೇರಿ ಪ್ರಮಾಣ ಪತ್ರ ದೊರಕಿಸಿಕೊಡಲು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಾದ್ಯಂತ ಆಗಸ್ಟ್ 15ರಂದು ಆಯಾ ತಾಲೂಕು ಕಚೇರಿಯಲ್ಲಿ ರಕ್ತದಿಂದ ಬರೆದ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸುವುದರ ಮೂಲಕ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರವನ್ನು ಪಡೆಯಲು ಸಮಾಜದ ಬಾಂಧವರು ಒಗ್ಗೂಡಿ ಶ್ರಮಿಸೋಣ ಎಂದರು.