ವಿಜಯಪುರ: ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿಕೊಂಡು ಹಿಂದಿರುಗುವಾಗ ಟಾಟಾ ಏಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಐದು ಜನ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮುದ್ದೇಬಿಹಾಳ ತಾಲೂಕಿನ ಕಂದಗನೂರ ಗ್ರಾಮದ ಬಳಿ ಸಂಭವಿಸಿದೆ.
ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹಳದೂರ ಗ್ರಾಮದವರಾದ ಇವರು ಟಾಟಾ ಏಸ್ ಬಾಡಿಗೆ ಮಾಡಿಕೊಂಡು ವಿಜಯಪುರ ಜಿಲ್ಲೆಯ ಕಂದಗನೂರ ಗ್ರಾಮದಲ್ಲಿ ತಮ್ಮ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಬಂದಿದ್ದರು. ಅಂತ್ಯಕ್ರಿಯೆ ಮುಗಿಸಿಕೊಂಡು ತಮ್ಮ ಊರಿಗೆ ತೆರಳುವ ಸಂದರ್ಭದಲ್ಲಿ ಚಿರಚನಕಲ್ಲ ಬಳಿಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಟಾಟಾ ಏಸ್ ಪಲ್ಟಿ ಹೊಡೆದಿದೆ.
ಸುಮಾರು 30 ಕ್ಕೂ ಹೆಚ್ಚು ಜನ ಇದ್ದ ಟಾಟಾ ಏಸ್ ಪಲ್ಟಿ ಹೊಡೆಯುತ್ತಿದ್ದಂತೆ ಸ್ಥಳದಲ್ಲೇ ಮೂವರು ಸಾವನಪ್ಪಿದ್ದಾರೆ. ಇವರೆಲ್ಲ ಬಮ್ಮನಹಳ್ಳಿಯ ನಿವಾಸಿಗಳು. ಇನ್ನು ಹಳದೂರ ಗ್ರಾಮದ ನಿವಾಸಿಗಳಾದ ಇಬ್ಬರು ಮುದ್ದೇಬಿಹಾಳ ತಾಲೂಕು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತಪಟ್ಟವರನ್ನು ಅಮೀನ್ ಸಾಬ ಹುಸೇನಸಾಬ್ ಸಾದನಿ (55), ಪಾರ್ವತಮ್ಮ ನೂರಂದಪ್ಪರಕ್ಕಸಗಿ (50), ಬಂದಗಿಸಾಬ ಲಾಲಸಾಬ ಮೊಕಾಸಿ(55), ಹುಸೇನಸಾಬ ರಾಜಾಸಾಬ ಮೊಕಾಶಿ(45), ಖಾಜಾಬಿ ಹುಸೇನಸಾಬ ಸಾದನಿ(48) ಎಂದು ಗುರುತಿಸಲಾಗಿದೆ.
ಗಾಯಾಳುಗಳನ್ನು ಮುದ್ದೇಬಿಹಾಳ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಾಳುಗಳಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿ, ಮೃತರ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಸರಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು. ಇನ್ನು ಮಾಜಿ ಶಾಸಕ ಅಪ್ಪಾಜಿ ನಾಡಗೌಡ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.