ಮುದ್ದೇಬಿಹಾಳ : ಇಲ್ಲಿನ ವೀರಶೈವ ಲಿಂಗಾಯತ ಸಮಾಜದ ಬಾಂಧವರು ಸ್ಮಶಾನದಲ್ಲಿ ರಕ್ಷಾ ಬಂಧನ ಆಚರಿಸುವ ಮೂಲಕ ವಿನೂತನ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
ಪಟ್ಟಣ ಆಲಮಟ್ಟಿ ರಸ್ತೆಯಲ್ಲಿರುವ ವೀರಶೈವ ಲಿಂಗಾಯತ ರುದ್ರಭೂಮಿಯಲ್ಲಿ ಭಾನುವಾರ ಸ್ವಚ್ಛತಾ ಅಭಿಯಾನದ ಜೊತೆಗೆ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು. ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ಸದಸ್ಯೆ ಸಹನಾ ಬಡಿಗೇರ ಅವರು ಸ್ಮಶಾನದಲ್ಲಿ ಎಲ್ಲ ಸಹೋದರರಿಗೆ ರಾಖಿ ಕಟ್ಟಿದರು.
ಈ ವೇಳೆ ಮಾತನಾಡಿದ ಹಸಿರು ತೋರಣ ಬಳಗದ ಸಂಚಾಲಕ ಮಹಾಬಳೇಶ್ ಗಡೇದ್, ಸ್ಮಶಾನದಲ್ಲಿ ರಕ್ಷಾಬಂಧನ ಆಚರಿಸುವ ಮೂಲಕ ವೈಜ್ಞಾನಿಕ ಹಾಗೂ ವೈಚಾರಿಕ ಪ್ರಜ್ಞೆಗೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಅಪವಿತ್ರ, ಭಯ ಎಂಬುದನ್ನು ಹೋಗಲಾಡಿಸುವ ಮೂಲಕ ಸಮಾಜಕ್ಕೆ ಸ್ಮಶಾನವು ಪವಿತ್ರ ಜಾಗ ಎಂಬುದನ್ನು ತೋರಿಸಿಕೊಡುವ ಕೆಲಸ ಮಾಡಿದ್ದು ಖುಷಿ ತಂದಿದೆ ಎಂದರು.
ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಮಾತನಾಡಿ, ರುದ್ರಭೂಮಿಯಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಮಾಡುವುದು ಹೊಸತನ ತಂದಿದೆ. ಬೆಳಗ್ಗೆ ನಾವೆಲ್ಲ ಶ್ರಮದಾನ ಮಾಡಬೇಕು ಎಂದು ಹೇಳಿದರು.
ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ ಮಾತನಾಡಿ, ಪ್ರತಿವಾರವೂ ಸ್ಮಶಾನದಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗುತ್ತಿದೆ. ಇದರಿಂದ ನೆಮ್ಮದಿಯ ಭಾವ ಮೂಡುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಹಾಗೂ ಸದಸ್ಯೆ ಸಹನಾ ಬಡಿಗೇರ ಸ್ಮಶಾನಕ್ಕೆ ಭೇಟಿ ನೀಡಿದ್ದ ತಾಳಿಕೋಟಿ ಶ್ರೀಗಳಿಗೂ ರಾಖಿ ಕಟ್ಟುವ ಮೂಲಕ ವಿಶೇಷ ಸಂಪ್ರದಾಯಕ್ಕೆ ಮುನ್ನುಡಿ ಬರೆದರು.