ಮುದ್ದೇಬಿಹಾಳ: ತಾಲೂಕಿನ ಹುಲ್ಲೂರ ತಾಂಡಾದ ಎರಡು ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಮಕ್ಕಳಿಗೆ ಕಳಪೆ ಆಹಾರಧಾನ್ಯ ಕೊಡುತ್ತಾರೆ. ತಾಂಡಾದ ಜನರೊಂದಿಗೆ ಉಡಾಫೆಯಿಂದ ವರ್ತಿಸುತ್ತಾರೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆ ಸಿಡಿಪಿಓ ಶಿವಮೂರ್ತಿ ಕುಂಬಾರ ಭೇಟಿ ನೀಡಿ ಇಬ್ಬರು ಕಾರ್ಯಕರ್ತೆಯರನ್ನು ತರಾಟೆಗೆ ತೆಗೆದುಕೊಂಡರು.
ತಾಂಡಾದಲ್ಲಿ ಎರಡು ಅಂಗನವಾಡಿಗಳಿದ್ದು, ಇಲ್ಲಿ ಮಕ್ಕಳಿಗೆ ಹುಳು ಹತ್ತಿದ ಕಡಲೆ ವಿತರಿಸಲಾಗುತ್ತಿದೆ. ಈ ಬಗ್ಗೆ ಕೇಳಲು ಹೋದವರೊಂದಿಗೆ ವಾಗ್ವಾದ ಮಾಡುತ್ತಿದ್ದಾರೆ. ಮಕ್ಕಳು, ಗರ್ಭಿಣಿಯರು ಮತ್ತು ಬಾಣತಿಯರಿಗೆ ಸರಿಯಾಗಿ ಆಹಾರ ಧಾನ್ಯ ವಿತರಿಸುತ್ತಿಲ್ಲ ಎಂದು ತಾಂಡಾದ ನಿವಾಸಿಗಳು ಅಧಿಕಾರಿಗೆ ದೂರು ನೀಡಿದರು.
ಈ ವೇಳೆ ಗರಂ ಆದ ಸಿಡಿಪಿಓ ಶಿವಮೂರ್ತಿ ಕುಂಬಾರ, ಅಂಗನವಾಡಿ ನಿಮ್ಮ ಮನೆ ಆಸ್ತಿ ಅಲ್ಲ. ಸಾರ್ವಜನಿಕರ ಆಸ್ತಿ ಎಂಬುದನ್ನು ತಿಳಿದುಕೊಳ್ಳಿ. ಮೊದಲು ಸರಿಯಾಗಿ ಜನರ ಜೊತೆಗೆ ಮಾತನಾಡುವುದನ್ನು ಕಲಿಯಿರಿ. ಆಗದಿದ್ದರೆ ಕೆಲಸ ಬಿಟ್ಟು ಹೋಗಿ ಎಂದರು.
ಅಂಗನವಾಡಿ ಕಾರ್ಯಕರ್ತೆಯರ ವಿರುದ್ಧ ಮೊದಲಿನಿಂದಲೂ ದೂರುಗಳು ಬರುತ್ತಲೇ ಇದೆ. ತಮ್ಮ ತಪ್ಪು ತಿದ್ದಿಕೊಳ್ಳದಿದ್ದರೆ ಅವರ ವಿರುದ್ಧ ನಿರ್ದಾಕ್ಷಣ್ಯ ಕ್ರಮ ಜರುಗಿಸಬೇಕು ಎಂದು ಸ್ಥಳದಲ್ಲಿದ್ದ ಜಿಪಂ ಸದಸ್ಯೆ ಪ್ರೇಮಾಬಾಯಿ ಚವ್ಹಾಣರ ಪುತ್ರ ಸಂತೋಷ ಚವ್ಹಾಣ ಒತ್ತಾಯಿಸಿದರು.
ಕೊನೆಗೆ ತಾವು ಮಾಡುತ್ತಿರುವುದು ತಪ್ಪಾಗಿದೆ ಎಂದು ಇಬ್ಬರು ಕಾರ್ಯಕರ್ತೆಯರು ಸಾರ್ವಜನಿಕರಲ್ಲಿ ಕ್ಷಮೆ ಕೋರಿದರು. ಈ ವೇಳೆ ಮೇಲ್ವಿಚಾರಕರಾದ ಎಸ್.ಎಂ.ಕದಗಲ್, ಉಮಾ ಪಾತ್ರದ, ಕೆ.ಎನ್ ಅಚನೂರ, ಗ್ರಾಪಂ ಮಾಜಿ ಸದಸ್ಯ ತಾವರಪ್ಪ ಜಾಧವ ಸೇರಿದಂತೆ ಹಲವರು ಇದ್ದರು.