ಮುದ್ದೇಬಿಹಾಳ : ದೆಹಲಿಯ ಮೀರತ್ ಬಳಿ ಇರುವ ಸೇನಾ ಕ್ಯಾಂಪ್‌ನಲ್ಲಿ ಕರ್ತವ್ಯದಲ್ಲಿದ್ದ ತಾಲೂಕಿನ ಜಟ್ಟಗಿ ಗ್ರಾಮದ ಸೈನಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ. ಯೋಧ ಮಂಜುನಾಥ ಯಲ್ಲಪ್ಪ ಹೂಗಾರ (22) ಭಾನುವಾರ ಆತ್ಮಹತ್ಯೆಗೆ ಶರಣಾದವರು.
ಮಂಜುನಾಥ ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ತರಬೇತಿ ಮುಗಿಸಿಕೊಂಡು ಸೇವೆಗೆ ಹಾಜರಾಗಿದ್ದರು. ಈ ಬಗ್ಗೆ ಸೇನಾ ಶಿಬಿರದ ಅಧಿಕಾರಿಗಳು ಮುದ್ದೇಬಿಹಾಳ ಪೊಲೀಸ್ ಠಾಣೆಗೆ ದೂರವಾಣಿ ಕರೆ ಮಾಡಿ, ಬೀಟ್ ಪೊಲೀಸರ ಮೂಲಕ ಕುಟುಂಬದವರಿಗೆ ಮಾಹಿತಿ ತಲುಪಿಸಿದ್ದಾರೆ.
ಈ ಬಗ್ಗೆ ಯೋಧನ ಸಂಬಂಧಿಕರಾದ ಲಕ್ಕಪ್ಪ ಬೊಮ್ಮಣಗಿ ಮಾತನಾಡಿ, ಮಂಜುನಾಥನ ಸ್ನೇಹಿತ ಕುಮಾರ ಅವರು, ಸೇನಾ ವಲಯದ ಅಧಿಕಾರಿಗಳಾಗಿದ್ದಾರೆ. ಸದ್ಯಕ್ಕೆ ಆತ ಕೆಲಸಕ್ಕೆ ಹೋದ ಸಂದರ್ಭದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.
ಚಿಕ್ಕ ವಯಸ್ಸಿನಲ್ಲಿಯೇ ಸೇನೆಗೆ ಸೇರಿದ್ದ ಮಂಜುನಾಥನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಸಮಸ್ಯೆಗಳು ಇರಲಿಲ್ಲ. ಕುಟುಂಬದೊಂದಿಗೂ ಚೆನ್ನಾಗಿಯೇ ಇದ್ದ. ಆದರೆ, ಯಾಕೆ ಹೀಗೆ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಾಗಿಲ್ಲ ಎಂದು ತಿಳಿಸಿದರು.
![muddebihala soldier suicide](https://etvbharatimages.akamaized.net/etvbharat/prod-images/kn-muddebihal-armymandeath-5-1-kac10030_05122021175704_0512f_1638707224_1002.jpg)
ಸೈನಿಕ ಮಂಜುನಾಥನಿಗೆ ಮದುವೆ ಆಗಿರಲಿಲ್ಲ. ತಂದೆ ಯಲ್ಲಪ್ಪ, ತಾಯಿ ನಾಗಮ್ಮ, ಇಬ್ಬರು ಸಹೋದರರು ಹಾಗೂ ಇಬ್ಬರು ಸಹೋದರಿಯರಿದ್ದಾರೆ.
ಎರಡು ದಿನಗಳಲ್ಲಿ ಸ್ವಗ್ರಾಮಕ್ಕೆ ಪಾರ್ಥಿವ ಶರೀರ : ಯೋಧ ಮಂಜುನಾಥ ಪಾರ್ಥಿವ ಶರೀರವು ಎರಡು ದಿನಗಳಲ್ಲಿ ಸ್ವಗ್ರಾಮಕ್ಕೆ ಆಗಮಿಸುವ ನಿರೀಕ್ಷೆ ಇದೆ. ಸದ್ಯಕ್ಕೆ ದೆಹಲಿ ಸೇನಾ ಆಸ್ಪತ್ರೆಯಲ್ಲಿ ಮೃತದೇಹವಿದೆ. ಮರಣೋತ್ತರ ಪರೀಕ್ಷೆ ನಡೆದ ಬಳಿಕ ವಿಮಾನದಲ್ಲಿ ಬೆಂಗಳೂರು, ಇಲ್ಲವೇ ಬೆಳಗಾವಿ ಮೂಲಕ ಮುದ್ದೇಬಿಹಾಳಕ್ಕೆ ಆಗಮಿಸಲಿದೆ.
'ನನ್ನಿಂದ ಓದೋಕೆ ಆಗುತ್ತಿಲ್ಲ.. ಅಪ್ಪ-ಅಮ್ಮ ಕ್ಷಮಿಸಿಬಿಡಿ': ಡೆತ್‌ನೋಟ್ ಬರೆದಿಟ್ಟು ಕಲಬುರಗಿಯಲ್ಲಿ ಯುವಕ ಆತ್ಮಹತ್ಯೆ