ಮುದ್ದೇಬಿಹಾಳ: ವೇತನ ನೀಡುವಂತೆ ಆಗ್ರಹಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಗುತ್ತಿಗೆ ಆಧಾರಿತವಾಗಿ ದುಡಿಯುತ್ತಿರುವ ಮಹಿಳಾ ಸಿಬ್ಬಂದಿ ವಿಜಯಪುರ ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರಿಗೆ ಮನವಿ ಮಾಡಿದರು.
ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡಿದ್ದ ಅಧ್ಯಕ್ಷರನ್ನು ಭೇಟಿಯಾದ ಕಾಳಗಿ ಸರ್ಕಾರಿ ಆಸ್ಪತ್ರೆಯ ಹೊರ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರು ತಮಗೆ ಕಳೆದ 9 ತಿಂಗಳಿನಿಂದ ವೇತನವಿಲ್ಲ. ಅಲ್ಲದೆ ಅನಿಶ್ಚಿತತೆಯಲ್ಲಿಯೇ ಸೇವೆ ಸಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಗಮನಕ್ಕೆ ನಮ್ಮ ಸಮಸ್ಯೆ ತಂದು ಪರಿಹಾರ ನೀಡುವಂತೆ ಮನವಿ ಮಾಡಿದರು.
ಕಳೆದ ಹಲವು ದಿನಗಳಿಂದ ಸಮಾನ ವೇತನಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಬೇಡಿಕೆ ಈಡೇರಿಕೆ ಕಾರ್ಯಕ್ಕೆ ಮುಂದಾಗುತ್ತಿಲ್ಲ. ಆರೋಗ್ಯ ಇಲಾಖೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರು ಕಡಿಮೆ ಸಂಬಳದಿಂದ ಕುಟುಂಬ ನಿರ್ವಹಣೆ ಮಾಡಲಾಗದ ಪರಿಸ್ಥಿತಿ ಎದುರಿಸುವಂತಾಗಿದೆ. ತಕ್ಷಣ ನೆರವಿಗೆ ಬರುವಂತೆ ಸರ್ಕಾರದ ಜೊತೆಗೆ ಪತ್ರ ವ್ಯವಹಾರ ಮಾಡುವುದಾಗಿ ಹಾಗೂ ಆರೋಗ್ಯ ಸಚಿವರ ಗಮನಕ್ಕೂ ತರುವುದಾಗಿ ಜಿಪಂ ಅಧ್ಯಕ್ಷೆ ಕಳ್ಳಿಮನಿ ಭರವಸೆ ನೀಡಿದರು.
ರೈತರ ಜಮೀನು ರಸ್ತೆ ದುರಸ್ತಿಗೆ 15 ಲಕ್ಷ ರೂ. ಅನುದಾನ ನೀಡಿ: ಮುದ್ದೇಬಿಹಾಳ ತಾಲೂಕಿನ ಕಾಳಗಿ ಗ್ರಾಮದಲ್ಲಿ ರೈತರ ಜಮೀನುಗಳಿಗೆ ಹೋಗಲು ರಸ್ತೆ ಪೂರ್ಣವಾಗಿ ಹದಗೆಟ್ಟಿದೆ. ರಸ್ತೆ ದುರಸ್ತಿಗೆ ಜಿಪಂನಿಂದ 15 ಲಕ್ಷ ರೂ. ಅನುದಾನ ಒದಗಿಸಿ ರಸ್ತೆ ರಿಪೇರಿ ಮಾಡಿಕೊಡಿ ಎಂದು ರೈತರು ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷೆ, ಜಿಪಂನಿಂದ ರಸ್ತೆ ದುರಸ್ತಿ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಸದ್ಯಕ್ಕೆ ತಾತ್ಕಾಲಿಕವಾಗಿ ಗರಸು ಮಣ್ಣು ಹಾಕಿ ತಿರುಗಾಡಲು ಅನುಕೂಲ ಕಲ್ಪಿಸಲಾಗುತ್ತದೆ ಎಂದರು.