ವಿಜಯಪುರ: ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ 6 ವರ್ಷದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಇಂಡಿ ತಾಲೂಕಿನ ಬೋಳೆಗಾಂವದಲ್ಲಿ ಈ ಘಟನೆ ಜರುಗಿದೆ.
ಆಗಸ್ಟ್ 9 ರಂದು ಗ್ರಾಮದ ಹಣಮಂತ ದೇವರ ಮನೆ ಅಂಗಳದಲ್ಲಿ ಇಬ್ಬರು ಬಾಲಕಿಯರು ಆಟವಾಡುತ್ತಿದ್ದರು. ಈ ಪೈಕಿ ಒಬ್ಬ ಸಹೋದರಿ ಮನೆಗೆ ಮರಳಿದರೆ, ಇನ್ನೊಬ್ಬ ಬಾಲಕಿ ದೇವಸ್ಥಾನದ ಮುಂಭಾಗದಲ್ಲಿ ಆಟ ಮುಂದುವರಿಸಿದ್ದಳು. ಆಗ ಬಾಲಕಿ ಮನೆಗೆ ಮರಳುತ್ತಿದ್ದಂತೆಯೇ ಇನ್ನೊಬ್ಬ ಬಾಲಕಿ ಎಲ್ಲಿ ಎಂದು ಪೋಷಕರು ಪ್ರಶ್ನಿಸಿದ್ದರು. ಇನ್ನೂ ಆಟವಾಡುತ್ತಿದ್ದಾಳೆಂದು ತಿಳಿಸಿದ್ದಾಳೆ. ಆಕೆಯನ್ನೂ ಮನೆಗೆ ಕರೆದುಕೊಂಡು ಬಾ ಎಂದು ತಿಳಿಸಿದ್ದರು. ಮತ್ತೆ ದೇವಸ್ಥಾನಕ್ಕೆ ತೆರಳಿ ಸಹೋದರಿಯನ್ನು ಕರೆಯಲು ಹೋದಾಗ ಬಾಲಕಿ ಅಲ್ಲಿರಲಿಲ್ಲವೆಂಬ ವಿಷಯವನ್ನು ಕುಟುಂಬ ಸದಸ್ಯರಿಗೆ ತಿಳಿಸಿದ್ದಳು.
ಆಗ ತಂದೆಯೇ ಪುನಃ ಹಣಮಂತ ದೇವರ ಗುಡಿಗೆ ತೆರಳಿ ಮಗಳನ್ನು ಹುಡುಕಿದ್ದಾರೆ. ಆದರೆ ಮಗಳು ಎಲ್ಲೂ ಕಾಣಿಸಿಲ್ಲ. ಕೊನೆಗೆ ಬೇಸತ್ತು ಹೊರ್ತಿ ಠಾಣೆಗೆ ತೆರಳಿ, ಮಗಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ.
ಆದರೆ, ಬಾಲಕಿ ಬೋಳೆಗಾಂವ್ ಗ್ರಾಮ ಸಮೀಪದ ಜಮೀನೊಂದರಲ್ಲಿ ಇಂದು ಶವವಾಗಿ ಪತ್ತೆಯಾಗಿದ್ದಾಳೆ. ಸುದ್ದಿ ತಿಳಿದ ಇಂಡಿ ಡಿವೈಎಸ್ಪಿ ಶ್ರೀಧರ ದೊಡ್ಡಿ, ಸಿಪಿಐ ಹಾಗೂ ಹೊರ್ತಿ ಠಾಣೆ ಸಿಪಿಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ದುಷ್ಕರ್ಮಿಗಳು ಬಾಲಕಿಯನ್ನು ಕೊಲೆ ಮಾಡಿರಬಹುದು ಎಂದು ಗೊತ್ತಾಗಿದೆ. ತನಿಖೆ ಮುಂದುವರಿದಿದೆ. ಈ ಕುರಿತು ಹೊರ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.