ವಿಜಯಪುರ: ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ನಡೆದ 3ನೇ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಬಿಳಿಜೋಳ ಬಿತ್ತನೆ ಕಡಿಮೆಯಾಗುತ್ತಿರುವ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮೊದಲು ಕೃಷಿ ಇಲಾಖೆಯ ಪ್ರಗತಿ ಬಗ್ಗೆ ಚರ್ಚೆ ನಡಸಲಾಯಿತು. ಕೃಷಿ ಇಲಾಖೆಯ ಉಪನಿರ್ದೇಶಕ ರಾಜಶೇಖರ ಇಲಾಖೆಯ ಸಾಧನೆ ಕುರಿತು ಮಾಹಿತಿ ಹಂಚಿಕೊಂಡರು. ಪ್ರಸ್ತಕ ಮುಂಗಾರು ಹಂಗಾಮಿನಲ್ಲಿ ನಿಗದಿತವಾಗಿ 657.6 ಮಿಲಿ ಮೀಟರ್ ಮಳೆಯಾಗಬೇಕಾಗಿತ್ತು. ವರುಣನ ಕೃಪೆಯಿಂದ 829 ಮಿ.ಮೀ. ಮಳೆಯಾಗಿದೆ. ಆದರೆ ಇದೇ ವೇಳೆ ಅಧಿಕ ಪ್ರಮಾಣದ ಮಳೆಯಿಂದ ಬೆಳೆ ಸಹ ಹಾನಿಯಾಗಿದೆ. ಜಿಲ್ಲೆಯ 7 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 5.30 ಲಕ್ಷ ಹೆಕ್ಟೇರ್ನಲ್ಲಿ ತೊಗರಿ ಬೆಳೆದ ಕಾರಣ ನಿರೀಕ್ಷೆಯಷ್ಟು ತೊಗರಿಗೆ ಬೆಲೆ ಬಂದಿಲ್ಲ ಎಂದು ಮಾಹಿತಿ ನೀಡಿದರು.
ಹಿಂಗಾರು ಹಂಗಾಮು ಆರಂಭವಾಗಿದ್ದು, ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಬಿಳಿಜೋಳ, ಕಡಲೆ ಬೆಳೆಯಲು ರೈತರು ಆಸಕ್ತಿ ತೋರುತ್ತಿಲ್ಲ. ಕಳೆದ 3-4 ವರ್ಷಗಳಿಂದ ಬಿಳಿಜೋಳ ಬಿತ್ತನೆ ಪ್ರದೇಶ ಕುಗ್ಗುತ್ತಿದೆ. ಇಲ್ಲಿಯವರೆಗೆ ಕನಿಷ್ಠ 2 ಲಕ್ಷ ಹೆಕ್ಟೇರ್ ಪ್ರದೇಶ ಕಡಿಮೆಯಾಗಿದೆ. ಎಲ್ಲರೂ ತೊಗರಿ ಬೆಳೆಯುತ್ತ ಆಸಕ್ತಿ ತೋರುತ್ತಿದ್ದಾರೆ ಎಂದು ಸಭೆಯಲ್ಲಿ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಮುದ್ದೇಬಿಹಾಳ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಇತ್ತೀಚೆಗೆ ಜಿಲ್ಲೆಯ ರೈತರು ಏಕತಳಿ ಬೆಳೆ ಬೆಳೆಯುತ್ತಿದ್ದಾರೆ. ಈ ಕಾರಣ ಬೆಲೆ ಕುಸಿಯುತ್ತಿದೆ. ಏಕತಳಿ ಕೈ ಕೊಟ್ಟರೆ ರೈತ ಕುಟುಂಬ ಬೀದಿಪಾಲಾಗಬೇಕಾಗುತ್ತದೆ. ರೈತರಲ್ಲಿ ಬಹುತಳಿ ಧಾನ್ಯ ಬೆಳೆಗಳ ಬಗ್ಗೆ ಕೃಷಿ ಇಲಾಖೆ ಜಾಗೃತಿ ಮೂಡಿಸಬೇಕು ಎಂದರು.
ಜಿಲ್ಲೆಯ ಪ್ರಮುಖ ಬೆಳೆಯಾಗಿರುವ ಬಿಳಿಜೋಳ ಬಿತ್ತನೆ ಆಗದಿರಲು ಕಾರಣ ಕೇವಲ ಏಕತಳಿ ಬಿತ್ತನೆ ಅಲ್ಲ, ಅದರ ಹಿಂದೆ ಯಾವ ಸಮಸ್ಯೆ ಇದೆ ಎನ್ನುವುದನ್ನು ತಿಳಿದುಕೊಂಡು ಬಿಳಿಜೋಳ ಬಿತ್ತನೆಗೆ ಪ್ರೋತ್ಸಾಹಿಸಬೇಕು ಎಂದರು.