ವಿಜಯಪುರ : ಭಾರತೀಯ ಜನತಾ ಪಾರ್ಟಿಯನ್ನು ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವುದು ನಮ್ಮ ಗುರಿಯಾಗಿದೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ‌್ ಸಂಘಟನೆ ಕಟ್ಟುವುದರಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದರು.
ವಿಜಯಪುರಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಣ್ಣ ಪುಟ್ಟ ಗೊಂದಲಗಳಿದ್ದವು. ಆದರೆ, ಈಗ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸಮರ್ಥವಾಗಿ ಪಕ್ಷ ಕಟ್ಟಲು ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಬಿಜೆಪಿಯಲ್ಲಿ ಪಕ್ಷ ಏನು ಜವಾಬ್ದಾರಿ ಕೊಡುತ್ತದೆಯೋ ಆ ಕೆಲಸ ಮಾಡುವುದು ನಮ್ಮ ಕರ್ತವ್ಯ. ಹಿಂದೆ ನಾನು ಸಚಿವನಾಗಿದ್ದ ವೇಳೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ಜವಾಬ್ದಾರಿ ವಹಿಸಲು ಹೇಳಿದರು. ಅದನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ನಾನು ಸಿಎಂ ಎಂದು ಕಾಂಗ್ರೆಸ್ನಲ್ಲಿ ಮಾತನಾಡುತ್ತಿದ್ದಾರೆ. ಆದರೆ, ಬಿಜೆಪಿ ಪಕ್ಷದಲ್ಲಿ ಹಾಗಿಲ್ಲ ಎಂದರು.
ಶಾಸಕ ಯತ್ನಾಳ್ ಅವರಿಗೆ ಕಳೆದ ಬಾರಿ ಕೂಡ ಹೇಳಿದ್ದೆ. ಅವರು ನನಗೆ ಆತ್ಮೀಯ ಸ್ನೇಹಿತ, ಹಿಂದುತ್ವವಾದಿ. ನನಗೆ ಖುಷಿಯಿದೆ. ಆದರೆ, ಬಹಿರಂಗ ಹೇಳಿಕೆಗಳಿಂದ ಹಾಳಾಗುತ್ತಿದ್ದಾರೆ. ಅವರ ಹೇಳಿಕೆಗಳಿಂದ ಪಕ್ಷಕ್ಕೆ ಹಾನಿಯಾಗುತ್ತದೆ ಎಂದು ನನಗೇನು ಅನಿಸುವುದಿಲ್ಲ ಎಂದರು.
ನಾಲ್ಕು ಗೋಡೆಗಳ ಮಧ್ಯೆ ಕುಳಿತು ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಈ ಕುರಿತು ನಾನು ಯತ್ನಾಳ್ ಅವರೊಂದಿಗೆ ಮಾತನಾಡುವೆ. ಮಠಾಧಿಪತಿಗಳು ಅವರ ಪರಿಚಯಸ್ಥರ ಬಗ್ಗೆ ಪ್ರೀತಿಯಿಂದ ಕೇಳುವುದು ತಪ್ಪಲ್ಲ. ಆದರೆ, ಬೆದರಿಕೆ ಹಾಕುವುದು ತಪ್ಪು ಎಂದು ಇತ್ತೀಚೆಗೆ ಬಿಎಸ್ವೈ ಸಿಎಂ ಸ್ಥಾನದಿಂದ ಕೆಳಗೆ ಇಳಿಯುವ ಕುರಿತು ನಡೆಸಿದ ಸಮಾವೇಶದ ಬಗ್ಗೆ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಬೆದರಿಕೆ ಹಾಕುವುದು ಅಂದ್ರೇ ಬಿಜೆಪಿ ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತ್ತು ಸಿಗಲ್ಲ. ಯಡಿಯೂರಪ್ಪ ಅವರಿಗೆ ಸಿಎಂ ಸ್ಥಾನದಿಂದ ಇಳಿಸಿದರೆ ಬಿಜೆಪಿ ಸರ್ವನಾಶ ಆಗುತ್ತದೆ ಎಂದು ಸ್ವಾಮಿಗಳು ಹೇಳುವುದು ಎಷ್ಟರ ಮಟ್ಟಿಗೆ ಸರಿ?. ಯಾವ ಸ್ವಾಮಿಗಳು ಏನೂ ಬೇಕಾದರು ಯಾರ ಬಗ್ಗೆಯೂ ಪ್ರೀತಿಯಿಂದ ಹೇಳಬಹುದು ಎಂದರು.
ರಾಯಣ್ಣ ಬ್ರಿಗೇಡ್ ಮುಂದುವರೆಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪನವರು, ರಾಯಣ್ಣ ಬ್ರಿಗೇಡ್ ಬಂದ್ ಮಾಡಿ ಎಂದು ಬಿಜೆಪಿ ವರಿಷ್ಠ ಅಮಿತ್ ಶಾ ಹೇಳಿದ್ದಾರೆ. ಅದನ್ನು ನಾನು ಸಂಪೂರ್ಣವಾಗಿ ಕ್ಲೋಸ್ ಮಾಡಿದ್ದೇನೆ. ಅದನ್ನು ಯಾರು ಮುಂದೆವರೆಸುತ್ತಾರೋ ಗೊತ್ತಿಲ್ಲ. ನಾನು ಆ ಕಡೆ ಹೋಗುವುದಿಲ್ಲ ಎಂದರು.