ವಿಜಯಪುರ: ಸಿಂದಗಿಯಲ್ಲಿ ಕಾಂಗ್ರೆಸ್ ಗಾಳಿ ಶುರುವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಮನಗೂಳಿ ಉತ್ತಮ ಕೆಲಸ ಮಾಡಿದ್ದಾರೆ. ಅವರ ಮಗ ಇದೀಗ ನಮ್ಮ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ನಮ್ಮ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಒಂದು ಕುಟುಂಬದ ಹಿಡಿತದಲ್ಲಿದ್ದಾರೆ ಎಂಬ ಸಿಎಂ ಬೊಮ್ಮಾಯಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನಾನು ಯಾವ ಕುಟುಂಬದ ಹಿಡಿತದಲ್ಲೂ ಇಲ್ಲ. ಅಧಿಕಾರ ವಿಕೇಂದ್ರೀಕರಣದ ಮೇಲೆ ನಂಬಿಕೆ ಇಟ್ಟವನು. ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟವನು ನಾನು. ಯಾವ ಕುಟುಂಬದ ಹಿಡಿತದಲ್ಲಿಲ್ಲ ಎಂದರು.
ಸಿಎಂ ಬೊಮ್ಮಾಯಿ RSS ನಲ್ಲಿ ಇದ್ದರಾ? ಅವರು ಮೂಲ RSS ಏನ್ರೀ? ಈಗ RSSನ ಹೊಗಳ್ತಾ ಇದ್ದಾರೆ. ಹಿಂದೆ ನಮ್ಮ ಜೊತೆಗೆ ಇದ್ದವರು. ಅವರ ತಂದೆ ಎಸ್.ಆರ್.ಬೊಮ್ಮಾಯಿ ಯಾವ ಪಾರ್ಟಿಯಲ್ಲಿದ್ದರು ಅವರಿಗೆ ಗೊತ್ತಿಲ್ಲವೆ? ಅವರು ಸಹ ಜನತಾದಳದಲ್ಲಿ ಇದ್ದವರು ಎಂದು ಹೇಳಿದರು.
ಬಿಜೆಪಿಗೆ ಇತ್ತಿಚೆಗೆ ಹೋದವರು RSSನ್ನು ಈಗ ಹೋಗಳ್ತಾ ಕೂತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವನು ನಾನು, ಯಾವ ಒಂದು ಫ್ಯಾಮಿಲಿ ಹಿಡಿತದಲ್ಲಿ ಇರೋಕೆ ಸಾಧ್ಯವಿಲ್ಲ ಎಂದರು.
ಹೆಚ್ಡಿಕೆ ಹಾಗೂ ಇಬ್ರಾಹಿಂ ಭೇಟಿ ವಿಚಾರ: ಅವರು ಯಾಕೆ ಭೇಟಿಯಾಗಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಏನು ಮಾತಾಡಿದ್ದಾರೋ ಏನೋ ನನಗೆ ಗೊತ್ತಿಲ್ಲ. ಹಾನಗಲ್ನಿಂದ ಸಿಂದಗಿಗೆ ಬಂದಿದ್ದೇನೆ. ಅವರು ಜೆಡಿಎಸ್ ಸೇರುತ್ತಾರೆ ಎಂಬ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.
ದಲಿತ - ಮುಸ್ಲಿಂ ಸಿಎಂ ವಿಚಾರ:
ಚುನಾವಣೆಗೂ ಮೊದಲೇ ಸಿಎಂ ಘೋಷಣೆ ಮಾಡುವ ಸಂಸ್ಕೃತಿ ಕಾಂಗ್ರೆಸ್ನಲ್ಲಿ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ಸಿಎಂ ಯಾರಾಗಬೇಕು ಎಂದು ಹೈಕಮಾಂಡ್ ನಿರ್ಧಾರ ಮಾಡುತ್ತೆ. ಹೈಕಮಾಂಡ್ ಯಾರನ್ನೂ ಸಿಎಂ ಮಾಡುತ್ತೆ ಅವರು ಆಗ್ತಾರೆ. ಯಾರನ್ನಾದರೂ ಸಿಎಂ ಮಾಡಬಹುದು ಎಂದರು.
ಗೆದ್ದ ಶಾಸಕರ ಅಭಿಪ್ರಾಯ ಕೂಡ ಕೇಳಬೇಕಾಗುತ್ತದೆ. ಆದರೆ, ಯಾರನ್ನ ಸಿಎಂ ಮಾಡಿದರು. ನನ್ನ ವಿರೋಧ ಇಲ್ಲ. ದಲಿತರನ್ನು ಮಾಡಿದರೂ ವಿರೋಧ ಇಲ್ಲ. ಮುಸ್ಲಿಂರನ್ನ ಮಾಡಿದರೂ ವಿರೋಧವಿಲ್ಲ ಎಂದು ಹೇಳಿದರು.
ಡಿಕೆಶಿ ಕುರಿತ ಸಂಭಾಷಣೆ ಪ್ರಕರಣ ತನಿಖೆ ವಿಚಾರ:
ತನಿಖೆ ಮಾಡಲಿ, ತನಿಖೆಗೆ ನಮ್ಮ ವಿರೋಧ ಇಲ್ಲ, ಹೋಮ್ ಮಿನಿಸ್ಟರ್ ಸುಮೊಟೊ ಕೇಸ್ ಹಾಕಿ ತನಿಖೆ ಮಾಡುತ್ತೇವೆ ಎಂದಿದ್ದಾರೆ, ಮಾಡಲಿ. ಆದರೆ ಯತ್ನಾಳ್ ಮಾಡಿದ ಆರೋಪದ ಬಗ್ಗೆಯೂ ತನಿಖೆಯಾಗಲಿ. ಬಿಎಸ್ವೈ ವಿರುದ್ಧ ಯತ್ನಾಳ್ ಮಾಡಿದ ಆರೋಪದ ಕುರಿತು ಸಹ ತನಿಖೆಯಾಗಬೇಕು ಎಂದರು.