ಮುದ್ದೇಬಿಹಾಳ(ವಿಜಯಪುರ): ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ವೃದ್ಧೆಯೊಬ್ಬರ ಮನವೊಲಿಸಲು ಅಧಿಕಾರಿಗಳು ಹರಸಾಹಸ ಪಟ್ಟಿರುವ ಘಟನೆ ಮುದ್ದೇಬಿಹಾಳ ತಾಲೂಕಿನ ಮಡಿಕೇಶ್ವರ ಗ್ರಾಮದಲ್ಲಿ ನಡೆದಿದೆ.
ಮಡಿಕೇಶ್ವರ ಗ್ರಾ.ಪಂ. ಪಿಡಿಒ ಸುಜಾತಾ ಯಡ್ರಾಮಿ ಅವರು, ಮಡಿಕೇಶ್ವರ ಗ್ರಾಮದಲ್ಲಿ ಲಸಿಕೆ ಪಡೆದುಕೊಳ್ಳಿ ಎಂದು ಅಜ್ಜಿಯೊಬ್ಬರಿಗೆ ಮನವೊಲಿಸಲು ಹೋದರೆ ''ಈ ಜೀವ ಬಂದಿರೋದೇ ಸಾಯಾಕ್. ನಾನು ಸೂಜಿ ಮಾಡಸ್ಕೊಳ್ಳಂಗಿಲ್ಲ. ನಾನು ಇಲ್ಲೇ ಸಾಯ್ತೇನೆ, ಆದ್ರೆ ನನಗೆ ಅದು(ಲಸಿಕೆ) ಬ್ಯಾಡ'' ಎಂದಿದ್ದಾರೆ.
ಲಸಿಕೆ ಕೊಡಿಸಲು ಅಧಿಕಾರಿಗಳ ಹರಸಾಹಸ:
ಇನ್ನೊಂದು ಘಟನೆಯಲ್ಲಿ ''ನಮಗೆ ಸೂಜಿ ಆಗಿ ಬರುವುದಿಲ್ಲ ಮೇಡಂ. ದಯವಿಟ್ಟು ನಮ್ಮನ್ನು ಬಿಟ್ಟು ಬಿಡಿ'' ಎಂದು ಯುವಕರೂ ಗೋಗರೆದು ಹೊಲ ಗದ್ದೆಗಳತ್ತ ಪಲಾಯನ ಮಾಡಿರುವ ಪ್ರಸಂಗವೂ ನಡೆದಿದೆ. ಇನ್ನೂ ಕೆಲವು ಗೃಹಿಣಿಯರು ತಮ್ಮ ಅಡುಗೆ ಮನೆಗಳಲ್ಲಿ ಅಡಗಿ ಕುಳಿತ ಘಟನೆಗಳು ಬೆಳಕಿಗೆ ಬಂದಿವೆ. ಲಸಿಕೆ ವಿತರಿಸುವ ವಿಚಾರದಲ್ಲಿ ಸಿಬ್ಬಂದಿ ಭಾರೀ ಸಾಹಸವನ್ನೇ ಮಾಡಬೇಕಾಗಿದೆ ಎಂದು ಪಿಡಿಒ ಸುಜಾತಾ ಯಡ್ರಾಮಿ ತಿಳಿಸಿದ್ದಾರೆ. ಕೆಲವೆಡೆ ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿ ಹೇಳಲು ಹೋದರೆ ಮನೆಯಿಂದಲೇ ಹೊರಗೆ ಓಡಿ ಹೋಗಿದ್ದಾರೆ ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
'ಸಾರಾಯಿ ಕೊಡಿಸ್ತೀನಿ ಲಸಿಕೆ ಹಾಕಿಸೋ ಮಾರಾಯ'
ದೇಶಾದ್ಯಂತ ಬೃಹತ್ ಕೋವಿಡ್ ಲಸಿಕಾ ಮೇಳದ ಅಂಗವಾಗಿ ಹೆಚ್ಚಿನ ಜನರಿಗೆ ಲಸಿಕೆ ನೀಡಲಾಗುತ್ತಿದೆ. ಆದರೆ ತಾಲೂಕಿನ ಮಡಿಕೇಶ್ವರ ಗ್ರಾಮದಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ತಿಳಿಹೇಳಲು ಹೋದ ಪಿಡಿಒ, ಆಶಾ, ಅಂಗನವಾಡಿ ಹಾಗೂ ಆರೋಗ್ಯ ಇಲಾಖೆಯ ಕಾರ್ಯಕರ್ತರು ಸುಸ್ತಾಗುವಂತಾಗಿದೆ.
ಇದನ್ನೂ ಓದಿ: ನರೇಂದ್ರ ಮೋದಿ ಜನ್ಮದಿನ: ಕರ್ನಾಟಕದಲ್ಲೂ ಸೇವೆ ಮತ್ತು ಸಮರ್ಪಣಾ ಅಭಿಯಾನ: ಅರುಣ್ ಸಿಂಗ್
ಓರ್ವ ವ್ಯಕ್ತಿಗೆ ಲಸಿಕೆ ಹಾಕಿಸಿಕೊಳ್ಳಿ ಎಂದರೆ ಮೊದಲು ನಿರಾಕರಿಸಿದ ಕಾರಣ ಆತನ ಮನವೊಲಿಸಲು ಮಡಿಕೇಶ್ವರ ಪಂಚಾಯತ್ ಸಿಬ್ಬಂದಿವೊಬ್ಬರು, ಲಸಿಕೆ ಹಾಕಿಸು ನಿನಗೆ ಎರಡು ಪಾವು(೧೦೦ ಎಂ.ಎಲ್) ಸಾರಾಯಿ ಕೊಡಿಸ್ತೇನೆ ಎಂದಿದ್ದಾರೆ. ಅದಕ್ಕೆ ಏನೂ ಪ್ರತಿಕ್ರಿಯಿಸದೇ ಇದ್ದಾಗ ಮತ್ತೆ ಒಂದು ಪಾವು ಹೆಚ್ಚಿಗೆ ಮಾಡಿ ಮೂರು ಪಾವು ಮದ್ಯ ಕೊಡಿಸ್ತಿನಿ, ಕೊವಿಡ್ ಸೂಜಿ ಮಾಡಿಸಿಕೊ ಎಂದಾಗ ತಲೆಯಲ್ಲಾಡಿಸಿ ಲಸಿಕೆ ಹಾಕಿಸಿಕೊಂಡಿರುವ ಘಟನೆ ನಡೆದಿದೆ.