ಮುದ್ದೇಬಿಹಾಳ: ತಾಲೂಕಿನ ಬಸರಕೋಡ ಬಳಿ ಬಾಕಿ ಉಳಿದಿರುವ ಮುಳವಾಡ ಏತ ನೀರಾವರಿ ಯೋಜನೆಯ ಹೂವಿನ ಹಿಪ್ಪರಗಿ ಶಾಖಾ ಕಾಲುವೆ ಕಾಮಗಾರಿ ಆರಂಭಿಸುವಂತೆ ಆಗ್ರಹಿಸಿ ರೈತರು ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಆರಂಭಿಸಿದರು.
ಸರ್ಕಾರದಿಂದ ₹ 192 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಶಾಖಾ ಕಾಲುವೆಗೆ 16 ಹಳ್ಳಿಗಳ ರೈತರಿಂದ 780 ಎಕರೆ ಜಮೀನನ್ನು ಸ್ವಾಧೀನ ಮಾಡಿಕೊಂಡು ₹ 23 ಕೋಟಿ ಪರಿಹಾರ ವಿತರಿಸುತ್ತಿದೆ. 24 ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿಗೆ ಒಳಪಡಲಿದೆ. ಆದರೆ ಬಸರಕೋಡ ಬಳಿ 350 ಮೀ.ಕಾಮಗಾರಿ ಮಾತ್ರ ಬಾಕಿ ಉಳಿದಿದ್ದು, ಅದನ್ನು ಆರಂಭಿಸದೇ ಅಧಿಕಾರಿಗಳು, ಜನಪ್ರತಿನಿಧಿಗಳು ನಿಷ್ಕಾಳಜಿ ತೋರಿದ್ದಾರೆ ಎಂದು ರೈತ ಮುಖಂಡ ಅರವಿಂದ ಕೊಪ್ಪ ದೂರಿದರು.
ಪಿಎಸ್ಐ ಎಚ್ಚರಿಕೆ: ಪೊಲೀಸ್ ಠಾಣೆಗೆ ಮಾಹಿತಿ ನೀಡದೇ ಧರಣಿ ಸತ್ಯಾಗ್ರಹ ನಡೆಸುತ್ತಿರುವುದಕ್ಕೆ ಪಿಎಸ್ಐ ಮಲ್ಲಪ್ಪ ಮಡ್ಡಿ ಹೋರಾಟಗಾರರನ್ನು ತರಾಟೆಗೆ ತೆಗೆದುಕೊಂಡರು. ಕೋವಿಡ್-19 ಸಂದರ್ಭದಲ್ಲಿ ಯಾವುದೇ ಧರಣಿ ಸತ್ಯಾಗ್ರಹ ನಡೆಸುವಂತಿಲ್ಲ. ನೀವು ಠಾಣೆಯಿಂದ ಪ್ರತಿಭಟನೆಗೆ ಅನುಮತಿಯನ್ನೂ ಪಡೆದಿಲ್ಲ. ಕೂಡಲೇ ಅಧಿಕಾರಿಗಳೊಂದಿಗೆ ಚರ್ಚಿಸಿ ನಿಮ್ಮ ಸಮಸ್ಯೆ ಬಗೆ ಹರಿಸಿಕೊಂಡು ಧರಣಿ ಸತ್ಯಾಗ್ರಹ ಅಂತ್ಯಗೊಳಿಸಿ ಎಂದು ಎಚ್ಚರಿಸಿದರು.
ಇದಕ್ಕೆ ಉತ್ತರಿಸಿದ ಹೋರಾಟಗಾರರು, ನಾವು ಸಿಪಿಐ ಅವರಿಗೆ ಈ ಬಗ್ಗೆ ಮಾಹಿತಿ ನೀಡಿಯೇ ಧರಣಿ ಸತ್ಯಾಗ್ರಹ ನಡೆಸುತ್ತಿರುವುದಾಗಿ ತಿಳಿಸಿದರು. ಕಾಲುವೆ ಕಾಮಗಾರಿ ಆರಂಭವಾಗಲು ಪ್ರಾಣ ಕೊಡಲು ಸಿದ್ಧ ಎಂದು ರೈತ ಮುಖಂಡ ಅರವಿಂದ ಕೊಪ್ಪ ಹೇಳಿದರು.