ಮುದ್ದೇಬಿಹಾಳ: ಜೂ.13ರಂದು ತೋಳ ಕಚ್ಚಿ ಸಾವನ್ನಪ್ಪಿರುವ ತಾಲೂಕಿನ ರೈತ ಮಲ್ಲಪ್ಪ ಶಿವಪ್ಪ ಕೂಡಗಿ ಅವರ ಕುಟುಂಬದ ನೆರವಿಗೆ ತಕ್ಷಣ ಶಾಸಕರು ಧಾವಿಸಬೇಕು ಎಂದು ಕೊಣ್ಣೂರಿನ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ. ಅಸ್ಕಿ ಒತ್ತಾಯಿಸಿದರು.
ಮುದ್ದೇಬಿಹಾಳ ಅಹಿಲ್ಯಾದೇವಿ ಹೋಳ್ಕರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್. ಮದರಿ ಅವರ ಜೊತೆ ಮಸೂತಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ್ದ ಅವರು, ಜೂ.13ರಂದು ಹುಚ್ಚು ತೋಳ ಕಚ್ಚಿ ಸಾವನ್ನಪ್ಪಿದ್ದ ಮಸೂತಿ ಗ್ರಾಮದ ಮಲ್ಲಪ್ಪ ಕೂಡಗಿ ಕುಟುಂಬದವರಿಗೆ ಫೌಂಡೇಶನ್ ಹಾಗೂ ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯಿಂದ ತಲಾ 25 ಸಾವಿರದಂತೆ 50 ಸಾವಿರ ರೂ.ಗಳ ಧನ ಸಹಾಯ ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೋಳ ಕಚ್ಚಿ ಸಾವನ್ನಪ್ಪಿರುವ ಈ ರೈತ ಕುಟುಂಬಕ್ಕೆ ಆಧಾರವಾಗಿದ್ದ. ಈಗ ಆತನ ಮರಣಾನಂತರ ಕುಟುಂಬ ಸಂಕಷ್ಟದಲ್ಲಿದೆ. ಕೂಡಲೇ ಸ್ಥಳೀಯ ಶಾಸಕರು ರೈತ ಕುಟುಂಬದವರನ್ನು ಭೇಟಿಯಾಗಿ ಧೈರ್ಯ ಹೇಳಬೇಕು ಎಂದರು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್. ಮದರಿ ಮಾತನಾಡಿ, ನಮ್ಮ ಅಹಿಲ್ಯಾದೇವಿ ಹೋಳ್ಕರ್ ಶಿಕ್ಷಣ ಸಂಸ್ಥೆಯ ವತಿಯಿಂದ 25 ಸಾವಿರ ರೂ.ಗಳನ್ನು ರೈತನ ಕುಟುಂಬಕ್ಕೆ ನೀಡುತ್ತಿದ್ದೇವೆ. ಅರಣ್ಯಾಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದು 7.50 ಲಕ್ಷ ರೂ. ಪರಿಹಾರ ರೈತನ ಕುಟುಂಬಕ್ಕೆ ಬರುತ್ತದೆ ಎಂದು ತಿಳಿಸಿದರು.