ವಿಜಯಪುರ: ಹುಡುಗಿಯನ್ನು ಚುಡಾಯಿಸಿದ್ದಕ್ಕೆ ಇಬ್ಬರು ಯುವಕರನ್ನು ಹಿಡಿದು ಕಂಬಕ್ಕೆ ಕಟ್ಟಿದ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದಲ್ಲಿ ನಡೆದಿದೆ. ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಲೇಜಿಗೆ ಹೋಗಿ ಬರುತ್ತಿದ್ದ ಹುಡುಗಿಯರನ್ನು ಆರೋಪಿಗಳು ನಿತ್ಯ ಚುಡಾಯಿಸುತ್ತಿದ್ದರು. ಇದರಿಂದ ಹುಡುಗಿಯರು ತೀವ್ರ ಮುಜುಗರ ಅನುಭವಿಸುತ್ತಿದ್ದರು ಎಂದು ತಿಳಿದುಬಂದಿದೆ.
ನಿನ್ನೆ ಹುಡುಗಿಯರು ಕಾಲೇಜಿನಿಂದ ಬರುವಾಗ ಯುವಕರು ಚುಡಾಯಿಸುತ್ತಿದ್ದುದನ್ನು ಗಮನಿಸಿದ ಸ್ಥಳೀಯರು, ರೆಡ್ ಹ್ಯಾಂಡ್ ಆಗಿ ಹಿಡಿದು ಕಂಬಕ್ಕೆ ಕಟ್ಟಿ ಧರ್ಮದೇಟು ನೀಡಿದ್ದಾರೆ. ಕೂಡಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಯುವಕರನ್ನು ಬಿಡಿಸಿ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಕೂಡಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವೃದ್ಧೆ ಸಾವು: ಕಬ್ಬಿನ ಚಕ್ಕಡಿ ಡಿಕ್ಕಿ ಹೊಡೆದು ವೃದ್ಧೆಯೊಬ್ಬಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಬಬಲೇಶ್ವರ ಪಟ್ಟಣದ ನಂದಿ ಸಕ್ಕರೆ ಕಾರ್ಖಾನೆ ಬಳಿ ನಡೆದಿದೆ. ಗುಣದಾಳ ಗ್ರಾಮದ 65 ವರ್ಷದ ಯಮನವ್ವ ಕಂಬಾಗಿ ಮೃತಪಟ್ಟಿರುವ ವೃದ್ಧೆ. ಬ್ಯಾಂಕ್‌ಗೆ ಹೋಗಿ ಹಣ ತೆಗೆದುಕೊಂಡು ಬರುವಾಗ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಬಲೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಾಕುವಿನಿಂದ ಹಲ್ಲೆ: ಮಾಮೂಲಿ ಕೊಟ್ಟಿಲ್ಲ ಎಂದು ಕೋಪಗೊಂಡು ವ್ಯಕ್ತಿಯೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ಬುಧವಾರ ನಡೆದಿದೆ. ಪಾರ್ಕಿಂಗ್ ಟೆಂಡರ್ ಕೊಡಿಸಿದ ವಿಚಾರಕ್ಕಾಗಿ ಮಾಮುಲಿ ಹಣ ಕೊಟ್ಟಿಲ್ಲ ಎಂದು ಅಸಮಾಧಾನಗೊಂಡು ಹಲ್ಲೆ ನಡೆಸಿದ್ದರು. ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಲ್ಲಂಗಡಿ ಹಣ್ಣು ವ್ಯಾಪಾರಿ ಉಸ್ಮಾನ್ ಖಾನ್ ಹಲ್ಲೆಗೊಳಗಾಗಿದ್ದ ವ್ಯಕ್ತಿ. ವಿಜಿನಾಪುರದಲ್ಲಿ ವಾಸವಾಗಿರುವ ಉಸ್ಮಾನ್ ಕೆ.ಆರ್.ಪುರ ಬಸ್ ಡಿಪೊ ಬಳಿ ಕಲ್ಲಂಗಡಿ ಹಣ್ಣು ವ್ಯಾಪಾರಿಯಾಗಿದ್ದ. ಕೆ.ಆರ್.ಪುರಂ ರೈಲ್ವೇ ನಿಲ್ದಾಣದ ಪಾರ್ಕಿಂಗ್ ಗುತ್ತಿಗೆಯನ್ನು ಉಸ್ಮಾನ್ ಸ್ನೇಹಿತ ಅಫೀಜ್ ಎಂಬಾತ ವಹಿಸಿಕೊಂಡಿದ್ದ. ಇದೇ ವಿಚಾರಕ್ಕಾಗಿ ಪರಿಚಯಸ್ಥನಾಗಿದ್ದ ಆರೋಪಿ ಸಮ್ಮು ಅಂಗಡಿ ಬಳಿ ಹೋಗಿ ಹಣಕ್ಕಾಗಿ ಪೀಡಿಸುತ್ತಿದ್ದ. ಹಣ ನೀಡಲು ನಿರಾಕರಿಸಿದಾಗ ಕಳೆದ ತಿಂಗಳು 25 ರಂದು ಉಸ್ಮಾನ್ ನನ್ನು ಕರೆಯಿಸಿಕೊಂಡು ಚಾಕುವಿನಿಂದ ಹಲ್ಲೆ ನಡೆಸಿದ್ದನು.
ಇದನ್ನೂ ಓದಿ: ಓದುವುದು ಬೇಡ ಮದುವೆಯಾಗು ಎಂದು ಪೀಡಿಸಿದ ಯುವಕ: ಮನನೊಂದು ಯುವತಿ ಆತ್ಮಹತ್ಯೆ