ಮುದ್ದೇಬಿಹಾಳ(ವಿಜಯಪುರ): ಮುದ್ದೇಬಿಹಾಳ ಮತ ಕ್ಷೇತ್ರದ ತಾಳಿಕೋಟಿ ಸಮೀಪದ ಡೋಣಿ ನದಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದ ಮಹಾರಾಷ್ಟ್ರ ಮೂಲದ ಇದ್ದಿಲು ಭಟ್ಟಿ ಕಾರ್ಮಿಕ ಕುಟುಂಬವನ್ನು ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ ನೇತೃತ್ವದ ತಂಡ ರಕ್ಷಿಸಿದೆ.
ಡೋಣಿ ನದಿ ದಡದಲ್ಲಿರುವ ಜಮೀನಿನೊಂದರಲ್ಲಿ ಈ ಕುಟುಂಬ ಗುಡಿಸಲು ಹಾಕಿಕೊಂಡು ವಾಸಿಸುತ್ತಿತ್ತು. ಗುರುವಾರ ಸಂಜೆ ಈ ವಿಷಯ ಜಿಲ್ಲಾಡಳಿತದ ಗಮನಕ್ಕೆ ಬರುತ್ತಿದ್ದಂತೆ ಕಾರ್ಯಾಚರಣೆಗೆ ಮುಂದಾದ ಕಂದಾಯ, ಪೊಲೀಸ್, ಅಗ್ನಿಶಾಮಕ ಹಾಗೂ ಮಾಧ್ಯಮದ ತಂಡ ಪ್ರವಾಹದಲ್ಲಿ ಸಿಲುಕಿದ್ದವರ ರಕ್ಷಣೆಗೆ ಮುಂದಾಯಿತು. ಆದರೆ, ನದಿಯಲ್ಲಿ ನೀರಿನ ಸೆಳೆತ ಅಧಿಕವಾಗಿದ್ದ ಕಾರಣ ಕಾರ್ಯಾಚರಣೆಯನ್ನು ಸಂಜೆ ಸ್ಥಗಿತಗೊಳಿಸಲಾಗಿತ್ತು.
ಇಂದು ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿ, ಹಗ್ಗದ ಸಹಾಯದಿಂದ ಕಾರ್ಮಿಕ ಕುಟುಂಬವನ್ನು ರಕ್ಷಣೆ ಮಾಡಿದ್ದಾರೆ. ಸಂತ್ರಸ್ತರು ಮಹಾರಾಷ್ಟ್ರದ ರಾಯಗಡ್ ಜಿಲ್ಲೆಯ ಪಾಲಿ ತಾಲೂಕಿನವರಾಗಿದ್ದಾರೆ. ರಕ್ಷಣೆ ಬಳಿಕ ಹಸಿವಿನಿಂದ ಬಳಲುತ್ತಿದ್ದ ಕುಟುಂಬಕ್ಕೆ ತಾಳಿಕೋಟಿ ತಾಲೂಕಾಡಳಿತದಿಂದ ಅಲ್ಪೋಪಹಾರ ಹಾಗೂ ಕುಡಿಯುವ ನೀರನ್ನು ನೀಡಲಾಯಿತು.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಉಪ ವಿಭಾಗಾಧಿಕಾರಿ ಬಲರಾಮ ಲಮಾಣಿ, ಪ್ರವಾಹದಲ್ಲಿ ಒಂದು ಕುಟುಂಬ ಸಿಲುಕಿಕೊಂಡಿದೆ ಎಂದು ಮಾಹಿತಿ ಬಂದ ಕೂಡಲೇ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ನಿನ್ನೆಯಿಂದ ಕಾರ್ಯಾಚರಣೆ ಆರಂಭಿಸಿದ್ದೆವು. ಗುರುವಾರ ಸಂಜೆ ಕತ್ತಲು ಆಗಿದ್ದರಿಂದ ಹಾಗೂ ಪ್ರವಾಹದ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಅವರನ್ನು ದಡಕ್ಕೆ ತರುವುದು ಬೇಡವೆಂದು ಕಾರ್ಯಾಚರಣೆ ನಿಲ್ಲಿಸಿದ್ದೆವು. ಬೆಳಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಿದಾಗ ನೀರಿನ ಹರಿವು ಇಳಿಮುಖಗೊಂಡಿದ್ದರಿಂದ ರಕ್ಷಣಾ ಕಾರ್ಯ ಯಶಸ್ವಿಯಾಯಿತು ಎಂದು ತಿಳಿಸಿದರು.