ವಿಜಯಪುರ : ಎರಡನೇ ಇಬ್ರಾಹಿಂ ಆದಿಲ್ ಶಾಹಿ ರಾಜ ನವರಸಪುರ ಗ್ರಾಮದಲ್ಲಿ ಕಲೆ, ಸಂಗೀತ, ಸಾಹಿತ್ಯ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದ್ದರು. ಇದರ ನೆನಪಿನಗಾಗಿ ನವರಸಪುರ ಉತ್ಸವ ಆಚರಣೆ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ ಕಳೆದ 6 ವರ್ಷಗಳಿಂದ ನವರಸಪುರ ಉತ್ಸವಕ್ಕೆ ಬ್ರೇಕ್ ಹಾಕಲಾಗಿದ್ದು, ಇದೀಗ ಮತ್ತೆ ಉತ್ಸವ ನಡೆಸಬೇಕೆಂಬ ಕೂಗು ಕೇಳಿ ಬಂದಿದೆ.
ಆದಿಲ್ ಶಾಹಿ ಕಾಲದಿಂದಲೂ ನಡೆದುಕೊಂಡು ಬಂದಿದ್ದ ನವರಸಪುರ ಉತ್ಸವ 2015ರ ನಂತರ ನಡೆದಿಲ್ಲ. ಬರ, ಪ್ರವಾಹ, ಕೊರೊನಾ ಕಾರಣದಿಂದ ಉತ್ಸವಕ್ಕೆ ಸರ್ಕಾರ ತಡೆ ನೀಡಿದೆ. ನಗರದ ಹೊರ ಭಾಗದ ತೊರವಿ ಬಳಿಯ ಸಂಗೀತ ಮಹಲ್ ನಲ್ಲಿ ನವರಸಪುರ ಉತ್ಸವನ್ನು ಆಚರಣೆ ಮಾಡಲಾಗುತ್ತಿತ್ತು. ಸ್ವತಃ ಗಾಯಕ ಮತ್ತು ಸಾಹಿತಿಯಾಗಿದ್ದ ಇಬ್ರಾಹಿಂ ಆದಿಲ್ ಶಾಹಿ, ಸಂಗೀತ ಮಹಲ್ ನಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸಿ ಕಲೆಯನ್ನು ಪ್ರೋತ್ಸಾಹಿಸಿ, ಕಲಾವಿದರನ್ನು ಬೆಂಬಲಿಸುತ್ತಿದ್ದನು. ಇದರ ನೆನಪಿಗಾಗಿ ಹಾಗೂ ಇತಿಹಾಸವನ್ನು ಜೀವಂತವಾಗಿಡಲು ನವರಸಪುರ ಉತ್ಸವವನ್ನು ಪ್ರತಿ ವರ್ಷ ಆಚರಣೆ ಮಾಡಿಕೊಂಡು ಬರಲಾಗುತ್ತಿತ್ತು. ಪ್ರತಿ ವರ್ಷ ಮೂರು ದಿನಗಳ ಕಾಲ ಉತ್ಸವ ಆಯೋಜನೆಗೊಳ್ಳುತ್ತಿತ್ತು. ಜಿಲ್ಲಾಡಳಿತದ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನವರಸಪುರ ಉತ್ಸವ ಆಯೋಜನೆ ಮಾಡುತ್ತಿತ್ತು.
ಆದರೆ, 2015 ರ ಬಳಿಕ ಭೀಕರ ಮಳೆ, ಪ್ರವಾಹ ಉಂಟಾದ ಹಿನ್ನೆಲೆ ಈ ಐತಿಹಾಸಿಕ ನವರಸಪುರ ಉತ್ಸವ ನಡೆದಿಲ್ಲ. ಇದೀಗ ಕೊರೊನಾ ಕಾರಣದಿಂದ ಮತ್ತೆ ನವರಸಪುರ ಉತ್ಸವಕ್ಕೆ ಬ್ರೇಕ್ ಹಾಕಲಾಗುತ್ತದೆ ಎನ್ನಲಾಗಿದೆ. ರಾಜ್ಯದಲ್ಲಿನ ಇತರೆ ಉತ್ಸವಗಳನ್ನು ಯಾವುದೇ ತಕರಾರು ಇಲ್ಲದೆ ನಡೆಸಲಾಗುತ್ತದೆ. ರಾಜಕೀಯ ಸಭೆ, ಸಮಾರಂಭಗಳಿಗೂ ಬರ, ಮಳೆ, ಕೊರೊನಾ ತಡೆ ಹಾಕಲ್ಲ. ಬರೀ ವಿಜಯಪುರ ಜಿಲ್ಲೆಯ ನವರಸಪುರ ಉತ್ಸವಕ್ಕೆ ಯಾಕೆ ಮೀನಾಮೇಷ ಎಣಿಸಲಾಗುತ್ತಿದೆ. ಕೂಡಲೇ ಜಿಲ್ಲಾಡಳಿತ ನವರಸಪುರ ಉತ್ಸವಕ್ಕೆ ಸಿದ್ಧತಾ ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರರು ಒತ್ತಾಯಿಸಿದ್ದಾರೆ.
ಇನ್ನು 2015 ರಲ್ಲಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನವರಸಪುರ ಉತ್ಸವ ನಡೆಸಲಾಗಿತ್ತು. ಮೂರು ದಿನಗಳ ಕಾಲ ಅದ್ಧೂರಿಯಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು. ಈ ಉತ್ಸವಕ್ಕೆ ಸರ್ಕಾರ ಪ್ರತಿವರ್ಷ 30 ಲಕ್ಷ ರೂಪಾಯಿಗಳನ್ನು ನೀಡುತ್ತದೆ. ಇತರೆ ಹಣವನ್ನು ಸಂಘ ಸಂಸ್ಥೆಗಳು, ವ್ಯಾಪಾರಸ್ಥರು, ಸರ್ಕಾರಿ ನೌಕರರು ದೇಣಿಗೆ ನೀಡುವುದರ ಮೂಲಕ ಉತ್ಸವಕ್ಕೆ ಸಹಾಯ ಮಾಡುತ್ತಾರೆ. 2016 ಹಾಗೂ 2017 ರ ಸಾಲಿಗೆ ಸರ್ಕಾರ 30 ಲಕ್ಷದಂತೆ ಒಟ್ಟು 60 ಲಕ್ಷ ರೂಪಾಯಿಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಿದೆ. ನಂತರ 2018, 2019 ಹಾಗೂ 2020 ರ ಸಾಲಿಗೆ ಹಣ ನೀಡಿಲ್ಲ. ಸದ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನವರಸಪುರ ಉತ್ಸವಕ್ಕಾಗಿ ಸರ್ಕಾರ ನೀಡಿದ ಒಟ್ಟು 60 ಲಕ್ಷ ರೂಪಾಯಿ ಮಾತ್ರ ಇವೆ. ಈ ಬಾರಿ ನವರಸಪುರ ಉತ್ಸವ ನಡೆಸುವ ಕುರಿತು ಜಿಲ್ಲಾ ಪಂಚಾಯತ್ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಚರ್ಚೆ ಮಾಡಲಾಗುತ್ತದೆ ಎಂದು ಡಿಸಿ ಪಿ ಸುನೀಲಕುಮಾರ್ ಹೇಳಿದ್ದಾರೆ.
ಒಟ್ಟಾರೆ ಕಳೆದ 6 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನವರಸಪುರ ಉತ್ಸವ ಈ ಬಾರಿಯಾದರೂ ನಡೆಯುತ್ತಾ ಎಂದು ಕಾದುನೋಡಬೇಕಿದೆ.