ವಿಜಯಪುರ: ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ವಿಜಯಪುರದಲ್ಲಿ ವಿಮಾನ ನಿಲ್ದಾಣ ಆರಂಭಿಸುವ ಕುರಿತು ಚರ್ಚೆ ನಡೆದಿದ್ದು, ಗೃಹ ಸಚಿವ ಎಂ.ಬಿ.ಪಾಟೀಲ್ ಮಾಡಿದ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಪ್ರಥಮ ಆದ್ಯತೆಯ ಮೇಲೆ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರ, ಮೂಲಭೂತ ಸೌಕರ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದ್ದು, ಗುಮ್ಮಟನಗರಿ ಜನರ ವಿಮಾನವೇರುವ ಕನಸು ನನಸಾಗುವ ಲಕ್ಷಣಗಳು ಕಾಣುತ್ತಿವೆ.
ಹೌದು, ಸೋಮವಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಾಸನದಲ್ಲಿ ನೋ ಫ್ರಿಲ್-ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ವಿಷಯ ಚರ್ಚಿಸಲಾಯಿತು. ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಗೃಹ ಸಚಿವ ಎಂ.ಬಿ.ಪಾಟೀಲ್ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲಾ ಕೇಂದ್ರ, ಹಲವಾರು ಐತಿಹಾಸಿಕ ಸ್ಥಳಗಳ ಆಕರ್ಷಣೀಯ ಪ್ರವಾಸಿ ತಾಣವಾಗಿರುವ ವಿಜಯಪುರ ನಗರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಮಾಡಬೇಕು. ಇದಕ್ಕಾಗಿ ಜಮೀನು ಕೂಡ ಮೀಸಲಿಡಲಾಗಿದೆ. ಆದರೆ ಈ ಹಿಂದೆ ಗುತ್ತಿಗೆ ಪಡೆದಿದ್ದ ಕಂಪನಿ ಯೋಜನೆಯನ್ನು ಕೈಬಿಟ್ಟಿದ್ದು, ಹಲವಾರು ಬಾರಿ ಕೇಂದ್ರ ವಿಮಾನಯಾನ ಇಲಾಖೆಗೆ ಪತ್ರ ಬರೆದು ಒತ್ತಾಯಿಸಿದರೂ ಯಾವುದೇ ಪ್ರಯೋಜವಾಗಿಲ್ಲ ಎಂದರು.
ಇನ್ನು ವಿಮಾನ ನಿಲ್ದಾಣ ಇಲ್ಲದೇ ಇರುವ ಕಾರಣ ದೇಶ-ವಿದೇಶಗಳಿಂದ ಬರುವ ಪ್ರವಾಸಿಗಳಿಗೆ, ಜಿಲ್ಲೆಯಲ್ಲಿ ಬೆಳೆಯುವ ಗುಣಮಟ್ಟದ ಹಣ್ಣು, ತರಕಾರಿ ರಫ್ತಿಗೆ ತೊಂದರೆಯಾಗಿದೆ. ಅಷ್ಟೇ ಅಲ್ಲದೆ, ಪ್ರವಾಸೋದ್ಯಮ, ಕೃಷಿ, ತೋಟಗಾರಿಕೆ ಕ್ಷೇತ್ರಗಳಿಗೆ ಭಾರಿ ಹಿನ್ನಡೆಯಾಗಿದ್ದು, ಜಿಲ್ಲೆಯಲ್ಲಿ ವ್ಯಾಪಾರ ಹಾಗೂ ಅಭಿವೃದ್ಧಿ ಆಗುತ್ತಿಲ್ಲ. ಎಷ್ಟು ದಿನ ಇದು ಹೀಗೆ ಮುಂದುವರೆಯಲಿದೆ? ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಖಾರವಾಗಿ ಪ್ರಶ್ನಿಸಿದರು ಎಂದು ತಿಳಿದುಬಂದಿದೆ.
ಈ ವಿಚಾರವನ್ನು ಗಣನೆಗೆ ತೆಗೆದುಕೊಂಡ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವಿಜಯಪುರದಲ್ಲಿ ವಿಮಾನ ನಿಲ್ದಾಣ ಆರಂಭಿಸುವ ಎಂ.ಬಿ.ಪಾಟೀಲ್‍ರ ಪ್ರಸ್ತಾಪ ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು. ನಂತರ ತಕ್ಷಣ ಈ ಕುರಿತು ಕ್ರಮ ಜರುಗಿಸಲು ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾರವರಿಗೆ ಸೂಚಿಸಿದರು ಎನ್ನಲಾಗಿದೆ.
ಕೇಂದ್ರ ಸರ್ಕಾರದಿಂದ ಶೇ. 51, ರಾಜ್ಯ ಸರ್ಕಾರದಿಂದ ಶೇ. 49ರಷ್ಟು ವೆಚ್ಚ ಭರಿಸುವ ಒಪ್ಪಂದದ ಅಡಿ ವಿಜಯಪುರ ವಿಮಾನ ನಿಲ್ದಾಣವನ್ನೇ ಆಯ್ಕೆ ಮಾಡಿ ಕಳುಹಿಸಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ತಿಳಿದು ಬಂದಿದೆ.
ಈ ಕುರಿತು ಬೆಂಗಳೂರಿನಿಂದ ಪ್ರತಿಕ್ರಿಯಿಸಿರುವ ಗೃಹ ಸಚಿವ ಎಂ.ಬಿ.ಪಾಟೀಲ್, ವಿಜಯಪುರದಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಬೇಕೆಂಬುದು ಹಲವಾರು ದಶಕಗಳ ಬೇಡಿಕೆಯಾಗಿದೆ. ಈ ಹಿಂದೆ ವಿಮಾನ ನಿಲ್ದಾಣ ನಿರ್ಮಿಸಲು ಮಾರ್ಗ್ ಎಂಬ ಕಂಪನಿಗೆ ಗುತ್ತಿಗೆ ಪಡೆದಾಗಲೂ ಆ ಕಂಪನಿ ಹಿಂದೆ ಸರಿದಿದ್ದರಿಂದ ನಿಲ್ದಾಣ ನಿರ್ಮಿಸುವ ಯೋಜನೆ ನನೆಗುದಿಗೆ ಬಿದ್ದಿತ್ತು. ಈ ಕುರಿತು ಹಲವಾರು ಸಭೆಗಳನ್ನು ಅಧಿಕಾರಿಗಳ ಮಟ್ಟದಲ್ಲಿ ಮಾಡಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿಕೊಡಲಾಗಿತ್ತು. ಇದೀಗ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.