ವಿಜಯಪುರ: ಭೋರ್ಗರೆಯುವ ಮಳೆಗಾಲದಲ್ಲಿ ಜಲಾಶಯ ವೀಕ್ಷಣೆಯೇ ಒಂದು ಆಹ್ಲಾದಕರ ಅನುಭವ. ಅದರಲ್ಲಿಯೂ ದುಮ್ಮಿಕ್ಕಿ ಹರಿಯುವ ಜಲಧಾರೆಗೆ ವಿದ್ಯುತ್ ದೀಪಾಲಂಕಾರ ಸಾಥ್ ನೀಡಿದರೆ, ಅದರ ಸೌಂದರ್ಯ ಅನುಭವ ಕವಿಗಳಿಗೂ ವರ್ಣಿಸಲಾಗದ ಪದಪುಂಜವೇ ತೆರದಂತಾಗುತ್ತದೆ. ಹೌದು ಅಂಥ ಭೂವಿಯ ಸ್ವರ್ಗ ನಮ್ಮ ಉತ್ತರ ಕರ್ನಾಟಕದಲ್ಲಿಯೇ ಇದೆ. ಅದು ಈಗ ಪ್ರವಾಸಿಗರನ್ನು ಕೈ ಬಿಸಿ ಕರೆಯುತ್ತಿದ್ದರೂ ಕೊರೊನಾ ಭೀತಿ ಎಲ್ಲವನ್ನೂ ಮರೆಮಾಚುತ್ತಿದೆ.
ಮಹಾರಾಷ್ಟ್ರದ ಕಾಶ್ಮೀರ ಪ್ರವಾಸಿ ತಾಣ ಮಹಾಬಳೇಶ್ವರದಲ್ಲಿ ಹುಟ್ಟಿ, ಕರ್ನಾಟಕದ ಬರದ ನಾಡಿನಲ್ಲಿ ಮೈದುಂಬಿ ಹರಿಯುತ್ತಿರುವ ಕೃಷ್ಣಾ ಭಾಗ್ಯ ಜಲ ನಿಗಮ ಮಂಡಳಿ ನಿರ್ವಹಣೆಯಲ್ಲಿರುವ ಆಲಮಟ್ಡಿಯ ಕೃಷ್ಣಾ ಜಲಾಶಯವಿದು. ಐತಿಹಾಸಿಕ ಪ್ರವಾಸಿ ತಾಣವಾಗಿರುವ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಲಾಲ್ ಬಹದ್ದೂರ್ ಶಾಸ್ತ್ರಿ ಸಾಗರ ಎಂದು ಕರೆಯಲಾಗುವ, ಈ ಜಲಾಶಯ ಹೆಚ್ಚು ಬಳಕೆಯಾಗುವುದು ಆಲಮಟ್ಡಿ ಜಲಾಶಯವೆಂದೇ. 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಅತಿ ದೊಡ್ಡ ಜಲಾಶಯ ಇದಾಗಿದೆ.
ಜಲಾಶಯದ ಆಕರ್ಷಣೆ ಹೆಚ್ಚಿಸಲು 2016ರಲ್ಲಿ ಜಲಾಶಯದಿಂದ ನೀರು ಹೊರಬಿಡಲು ನಿರ್ಮಿಸಿರುವ 26 ಕ್ರೆಸ್ಟ್ ಗೇಟ್ ಗಳಿಗೆ 36 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್ ದೀಪಾಲಂಕಾರ ಅಳವಡಿಸಲಾಗಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಜಲಾಶಯ ಭರ್ತಿಯಾದಾಗ ನೀರು ಹೊರ ಬಿಡುವಾಗ ಈ ವಿದ್ಯುತ್ ದೀಪಾಲಂಕಾರ ಸ್ವೀಚ್ ಆನ್ ಮಾಡಲಾಗುತ್ತಿದೆ. ಇದನ್ನು ನೋಡಲೆಂದೇ ದೇಶ - ವಿದೇಶಿ ಪ್ರವಾಸಿಗರು ಹರಿದು ಬರುತ್ತಾರೆ. ನೋಡಲು ಕೆಆರ್ ಎಸ್ ಡ್ಯಾಂ ಮೀರಿಸುವಷ್ಟು ಅದ್ಬುತವಾಗಿ ಕಂಗೊಳಿಸುತ್ತಿದೆ.
ಆಲಮಟ್ಟಿ ಜಲಾಶಯಕ್ಕೆ ಲಾಲ್ ಬಹದ್ದೂರ ಶಾಸ್ತ್ರಿ ಸಾಗರ ಎಂದು ನಾಮಕರಣ ಮಾಡಿದಾಗ ಡ್ಯಾಂ ಮೇಲೆ ಅವರ ಹೆಸರು ಅಳವಡಿಸಲಾಯಿತು. ಅದಕ್ಕೆ ಮಾತ್ರ ಮೊದಲು ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಇತ್ತು. ಈಗ ಎಲ್ಲ 26 ಕ್ರಸ್ಟ್ ಗೇಟ್ ಗಳಿಗೆ ಒಟ್ಟು 156 ಆರ್ ಜಿಡಿ ಹಾಗೂ ಎಲ್ ಇಡಿ ಬಲ್ಬ್ ಅಳವಡಿಸಲಾಗಿದೆ. ಈ ಬಲ್ಬ್ ಗಳ ಒಂದರ ಬೆಲೆ ಸರಿ ಸುಮಾರು 20 ಸಾವಿರ ರೂ. ಇದೆ. ಇತ್ತೀಚಿಗೆ ತಾಂತ್ರಿಕ ತೊಂದರೆಯಿಂದ ಕೆಲ ಬಲ್ಬ್ ಸುಟ್ಟು ಹೋಗಿವೆ. ಅವುಗಳ ರಿಪೇರಿ ಕಾರ್ಯ ನಡೆದಿದೆ.
ಈ ಅತ್ಯಾಕರ್ಷಕ ವಿದ್ಯುತ್ ದೀಪಾಲಂಕಾರದ ಸವಿಯನ್ನು ನೀವು 4-5 ಕೀಲೋ ಮೀಟರ್ ದೂರದಿಂದಲೇ ವೀಕ್ಷಿಸಬಹುದು. ರಾಜ್ಯ ಹೆದ್ದಾರಿ ಹಾಗೂ ರೈಲು ಮಾರ್ಗದ ವ್ಯವಸ್ಥೆ ಇರುವ ಕಾರಣ ಬಸ್, ರೈಲಿನಲ್ಲಿ ಕುಳಿತುಕೊಂಡೇ ನೋಡುವ ಸೌಲಭ್ಯವಿದೆ. ಈ ವಿದ್ಯುತ್ ದೀಪಾಲಂಕಾರ ಆಲಮಟ್ಟಿ ಉದ್ಯಾನಕ್ಕೆ ಕಳಸವಿಟ್ಟಂತಾಗಿದೆ.
ಕಳೆದ ನಾಲ್ಕು ತಿಂಗಳಿಂದ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿರುವ ಕೊರೊನಾ ಭೀತಿ ಕಾರಣ ಆಲಮಟ್ಟಿ ಉದ್ಯಾನಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ಈ ಸೌಂದರ್ಯ ಸೊಬಗನ್ನು ಹತ್ತಿರದಿಂದ ನೋಡುವ ಸೌಭಾಗ್ಯ ಪ್ರವಾಸಿಗರು ಈ ಬಾರಿ ಕಳೆದುಕೊಂಡಿದ್ದಾರೆ. ಮುಂದಿನ ವರ್ಷವಾದರೂ ದೇಶಕ್ಕೆ ಯಾವುದೇ ಮಹಾಮಾರಿಗಳ ಕಂಟಕವಿಲ್ಲದಿದ್ದರೆ ಈ ಸೌಂದರ್ಯ ಸೊಬಗನ್ನು ಖಂಡಿತವಾಗಿ ಪ್ರವಾಸಿಗರು ಮಿಸ್ ಮಾಡಿಕೊಳ್ಳಲಾರರು.