ವಿಜಯಪುರ : ಸಿಂದಗಿ ಉಪಚುನಾವಣೆಯಲ್ಲಿ ಕ್ಷೇತ್ರದಾದ್ಯಂತ ರಾಜಕೀಯ ಪಕ್ಷಗಳಿಂದ ಅಬ್ಬರದ ಪ್ರಚಾರ ನಡೆಯುತ್ತಿದೆ. ಇಂದು ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪರ ಸಿಂದಗಿ ತಾಲೂಕಿನ ಮೋರಟಗಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಈಶ್ವರ ಖಂಡ್ರೆ, ಎಂ.ಬಿ.ಪಾಟೀಲ್ ಸೇರಿ ಪಕ್ಷದ ನಾಯಕರು ಮತಯಾಚಿಸಿದ್ರು.
‘ರಾಜ್ಯದಲ್ಲಿರುವುದು ಅನೈತಿಕ ಸರ್ಕಾರ’
ಮೋರಟಗಿಯಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಬಿಎಸ್ವೈ ರಾಜ್ಯದಲ್ಲಿ ಅನೈತಿಕ ಸರ್ಕಾರ ರಚಿಸಲು ಆಪರೇಷನ್ ಕಮಲ ಮಾಡಿದ್ರು. ಕೋಟ್ಯಂತರ ರೂ.ಖರ್ಚು ಮಾಡಿ ಕಾಂಗ್ರೆಸ್- ಜೆಡಿಎಸ್ನ 17 ಶಾಸಕರನ್ನು ಖರೀದಿಸಿದ್ರು. ಸಮ್ಮಿಶ್ರ ಸರ್ಕಾರ ಉರುಳಿಸಿ, ಬಿಜೆಪಿ ಸರ್ಕಾರ ರಚಿಸಿ ಸಿಎಂ ಆದರು.
ಆದರೆ, ಈಗ ಏನಾಗಿದೆ?, ಬಿಜೆಪಿ ಹೈಕಮಾಂಡ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿತು. ಆಗ ಅವರು ಕಣ್ಣೀರು ಹಾಕಿದ್ದನ್ನು ನೀವು ನೋಡಿದ್ದೀರಿ. ಬಳಿಕ ಮೋದಿ, ಶಾಗೆ ಹೆದರಿ ನಾನೇ ಸಿಎಂ ಸ್ಥಾನದಿಂದ ಕೆಳಗಿಳಿದಿದ್ದೇನೆ ಎಂದು ಸಮಜಾಯಿಷಿ ನೀಡಿದ್ರು ಎಂದು ವ್ಯಂಗ್ಯವಾಡಿದ್ರು.
‘ಭ್ರಷ್ಟಾಚಾರದಲ್ಲಿ ಮುಳುಗಿದ್ದ ಅಪ್ಪ-ಮಗ’
ಇಷ್ಟೇ ಅಲ್ಲ, ಅಪ್ಪ-ಮಗ(ಯಡಿಯೂರಪ್ಪ-ವಿಜಯೇಂದ್ರ) ಸೇರಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದರು. ಈಗ ಬಂದವರೂ ಅದನ್ನೇ ಮುಂದುವರಿಸುತ್ತಿದ್ದಾರೆ ಅನ್ನೋ ಮೂಲಕ ಬೊಮ್ಮಾಯಿ ವಿರುದ್ಧ ಕಿಡಿಕಾರಿದ್ರು.
‘ಆರು ರಾಜ್ಯಗಳಲ್ಲಿ ಅನೈತಿಕ ಸರ್ಕಾರ’
ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಮೋದಿ ಸರ್ಕಾರ ದೇಶದ 6 ರಾಜ್ಯಗಳಲ್ಲಿ ತಮ್ಮ ಅನೈತಿಕ ಸರ್ಕಾರ ನಡೆಸುತ್ತಿದೆ. ಬಿಜೆಪಿ ಕೋಟ್ಯಂತರ ರೂಪಾಯಿ ಕೊಟ್ಟು ಶಾಸಕರನ್ನು ಖರೀದಿಸಿ, ಐಟಿ-ಇಡಿ ದಾಳಿ ನಡೆಸಿ ಎಂಎಲ್ಎಗಳನ್ನು ಬೆದರಿಸಿ ತಮ್ಮತ್ತ ಸೆಳೆಯುತ್ತಿದೆ ಎಂದು ಆರೋಪಿಸಿದ್ರು. ಮೋದಿ ಸರ್ಕಾರ ಬಾಯಿ ಮಾತಿನಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎನ್ನುತ್ತಾರೆ. ಅವರು ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ಸಬ್ ಕಾ ಸಾಥ್ ಸಬ್ ಕಾ ಸತ್ಯನಾಶ್ ಮಾಡಿದ್ದಾರೆ ಎಂದು ಟೀಕಿಸಿದರು.
‘ಮೋದಿ-ಅಮಿತ್ ಶಾ ನನ್ನ ಸೋಲಿಸಿದ್ರು’
ಕಳೆದ ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಜನ ಸೋಲಿಸಲಿಲ್ಲ. ಮೋದಿ, ಅಮಿತ್ ಶಾ ಸೇರಿ ನನ್ನನ್ನು ಸೋಲಿಸಿದ್ದಾರೆ. 49 ವರ್ಷಗಳ ಕಾಲ ರಾಜಕೀಯ ಜೀವನ ನಡೆಸಿದ್ದೇನೆ ಎಂದೂ ಸೋಲುಂಡಿರಲಿಲ್ಲ. ಮೊದಲ ಬಾರಿ ಸೋತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ರು.
ಇದನ್ನೂ ಓದಿ: ಕಾಂಗ್ರೆಸ್ ಮುಖಂಡರು 10 ತಲೆಯ ರಾವಣರಿದ್ದಂತೆ: ಸಚಿವ ಬಿ. ಶ್ರೀರಾಮುಲು