ಮುದ್ದೇಬಿಹಾಳ: ತಾಲ್ಲೂಕಿನ ಮೂರು ಟಿಎಪಿಸಿಎಂಎಸ್ ಸೇರಿದಂತೆ ಒಟ್ಟು 21 ಪಿಕೆಪಿಎಸ್ ನಲ್ಲಿ ಬೆಂಬಲ ಬೆಲೆಯಡಿ ತೊಗರಿ ಖರೀದಿಗೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದು ಡಿ.30 ರವರೆಗೆ ನೋಂದಣಿ ಮಾಡಿಕೊಳ್ಳಲು ಕಡೆ ದಿನ ಎಂದು ಮುದ್ದೇಬಿಹಾಳ ಟಿಎಪಿಸಿಎಂಎಸ್ ಅಧ್ಯಕ್ಷ ಮನೋಹರ ಮೇಟಿ ತಿಳಿಸಿದ್ದಾರೆ.
ಪಟ್ಟಣದ ಟಿಎಪಿಸಿಎಂಎಸ್ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು, ಒಬ್ಬ ರೈತರಿಂದ ಇಪ್ಪತ್ತು ಕ್ವಿಂಟಲ್ ತೊಗರಿ ಖರೀದಿಸಲಾಗುತ್ತದೆ. ಈಗಾಗಲೇ ನೋಂದಣಿ ಪ್ರಕ್ರಿಯೆ ಶುರುವಾಗಿದ್ದು ಜ.1 ರಿಂದ ತೊಗರಿಯನ್ನು ಖರೀದಿಸಲಾಗುತ್ತದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಿದರು.
ಇದೇ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಬಿರಾದಾರ ಮಾತನಾಡಿ, ಸರ್ಕಾರ ಬೆಂಬಲ ಬೆಲೆಯಡಿ ತೊಗರಿ ಖರೀದಿ ಪ್ರಕ್ರಿಯೆ ಆರಂಭಿಸಿರುವುದು ಸ್ವಾಗತಾರ್ಹ ನಿರ್ಧಾರವಾಗಿದೆ. ಆದರೆ ನೋಂದಣಿ ಪ್ರಕ್ರಿಯೆಯನ್ನು ಇನ್ನೂ ಸ್ವಲ್ಪ ದಿನಗಳ ಕಾಲ ವಿಸ್ತರಿಸಬೇಕು ಎಂದರು.
ಈಗಾಗಲೇ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಮುದ್ದೇಬಿಹಾಳ, ತಾಳಿಕೋಟಿ, ನಾಲತವಾಡ ಟಿಎಪಿಸಿಎಂಎಸ್, ಬಿದರಕುಂದಿ, ಹಡಲಗೇರಿ, ಹಿರೂರ, ಹಿರೇಮುರಾಳ, ಜಮ್ಮಲದಿನ್ನಿ, ಕವಡಿಮಟ್ಟಿ, ರಕ್ಕಸಗಿ, ಯರಝರಿ, ಕೋಳೂರ ಎಲ್.ಟಿ, ಬಂಟನೂರ, ಹುನಕುಂಟಿ, ಅಡವಿ ಸೋಮನಾಳ, ಬಳಗಾನೂರ, ಮಡಿಕೇಶ್ವರ ಪಿಕೆಪಿಎಸ್ಗಳಲ್ಲಿ ತೊಗರಿ ಖರೀದಿಗೆ ಕೇಂದ್ರಗಳನ್ನು ತೆರೆಯಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಸಹಾಯಕ ವ್ಯವಸ್ಥಾಪಕ ಗುರುರಾಜ ಕೋನರೆಡ್ಡಿ ಸಿಬ್ಬಂದಿ ಮಹಾಂತಗೌಡ ಪಾಟೀಲ, ರೈತ ಮುಖಂಡ ರಮೇಶ ಕರಡ್ಡಿ ಮೊದಲಾದವರು ಇದ್ದರು.