ವಿಜಯಪುರ : ರಸ್ತೆ ಕಾಮಗಾರಿ ಪರಿಶೀಲಿಸುತ್ತಿದ್ದ ವೇಳೆ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಮೇಲೆ ಕೆಲ ಕಿಡಗೇಡಿಗಳು ಹಲ್ಲೆ ನಡೆಸಿರುವ ಘಟನೆ ನಗರದ ಸೊಲ್ಲಾಪುರ ರಸ್ತೆಯ ಬಳಮಕರ ಕಲ್ಯಾಣ ಮಂಟಪದ ಬಳಿ ನಡೆದಿದೆ.
ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ಭಾನುವಾರ ಸಂಜೆ ಬಳಮಕರ ಕಲ್ಯಾಣ ಮಂಟಪದ ಬಳಿ ನಡೆಯುತ್ತಿದ್ದ ವಚನ ರಸ್ತೆ ಕಾಮಗಾರಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಕೆಲ ಕಿಡಿಗೇಡಿಗಳ ಆಯುಕ್ತರು ನಿಲ್ಲಿಸಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ.
ಈ ವೇಳೆ ಸಾವಕಾಶವಾಗಿ ವಾಹನ ಓಡಿಸಿ ಎಂದು ಬುದ್ದಿವಾದ ಹೇಳಿದ್ದಕ್ಕೆ ಸಮರ್ಥ ಶಿವಕುಮಾರ ಸಿಂದಗಿ ಸೇರಿ ನಾಲ್ವರು ರಸ್ತೆ ಬದಿ ನಿಂದೇನು ಕೆಲಸ ಎಂದು ಆವಾಜ್ ಹಾಕಿದ್ದಾರೆ. ಆಗ ಸ್ಥಳೀಯರು ಅವರು ಪಾಲಿಕೆ ಆಯುಕ್ತರು ಎಂದು ತಿಳಿಸಿದ್ದಾರೆ. ಆದರೂ ಅವರ ಮಾತು ಕೇಳದೇ ಆಯುಕ್ತರ ಮೇಲೆ ನಾಲ್ವರು ಸೇರಿ ಹಲ್ಲೆ ನಡೆಸಿ, ಮುಖಕ್ಕೆ ಬಲವಾಗಿ ಹೊಡೆದಿದ್ದಾರೆ.
ಪಾಲಿಕೆ ಆಯುಕ್ತರ ಮೇಲೆ ಹಲ್ಲೆ : ಪೊಲೀಸರು ಮಧ್ಯೆ ಪ್ರವೇಶಿಸಿ ಕಿಡಿಗೇಡಿಗಳನ್ನು ಬಿಡಿಸಲು ಹೋದರೂ ಸಹ ಹಲ್ಲೆ ನಡೆಸಿದ್ದಾರೆ. ತಾನೊಬ್ಬ ರಾಜಕೀಯ ಮುಖಂಡರ ಹಿಂಬಾಲಕರು, ಸುಮ್ಮನಾಗದಿದ್ದರೆ ನೋಡಿಕೊಳ್ಳುವೆ ಎಂದು ಧಮಕಿ ಹಾಕಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಸಮರ್ಥ ಸಿಂದಗಿ ಅವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೂರ್ವನಿಯೋಜಿತ ಕೃತ್ಯ : ಪಾಲಿಕೆ ಆಯುಕ್ತ ವಿಜಯ ಮೆಕ್ಕಿಳಕಿ ಮೇಲಿನ ಹಲ್ಲೆ ಪೂರ್ವನಿಯೋಜಿತ ಕೃತ್ಯವಾಗಿದೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ. ಇದಕ್ಕೆ ಸೂಕ್ತ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಲಿಕೆ ಸಿಬ್ಬಂದಿ, ಆಯುಕ್ತರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಥ ವೇಳೆ ಈ ರೀತಿಯ ಹಲ್ಲೆಗಳು ಅವರ ಆತ್ಮಸೈರ್ಯ ಕುಗ್ಗಿಸುತ್ತವೆ. ಅವರ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಆರೋಪಿಗಳು ಯಾರು ಎಂಬುವುದರ ಗುರುತು ಪತ್ತೆ ಮಾಡಲಾಗಿದೆ. ರಾಜಕೀಯ ಮುಖಂಡರೊಬ್ಬರ ಪುತ್ರ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ, ಪೊಲೀಸರು ತನಿಖೆ ನಡೆಸಿ ಕ್ರಮಕೈಗೊಳ್ಳುತ್ತಾರೆ ಎಂದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ರೀತಿ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ನಡೆಸುವುದನ್ನು ಸಹಿಸುವುದಿಲ್ಲ. ಪಾಲಿಕೆ ಆಯುಕ್ತರೆಂದು ಸಾರ್ವಜನಿಕರು ಹೇಳಿದರೂ ಕೇಳದ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ.
ಈ ಗಲಾಟೆಯನ್ನು ವಿಡಿಯೋ ಚಿತ್ರೀಕರಣ ಮಾಡಲು ಮುಂದಾಗಿದ್ದ ವ್ಯಕ್ತಿಯ ಮೊಬೈಲ್ ಒಡೆದಿದ್ದಾರೆ. ಸಾರ್ವಜನಿಕರ ಬಳಿ ಯಾವುದೇ ಸಾಕ್ಷ್ಮಗಳು ಇದ್ದರೆ ಅದನ್ನು ಪೊಲೀಸರಿಗೆ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.