ಕಾರವಾರ: ಗೋವುಗಳನ್ನು ಕದ್ದೊಯ್ಯಲು ಯತ್ನಿಸಿರುವ ಆರೋಪದಡಿ ನಾಲ್ವರನ್ನು ಗ್ರಾಮಸ್ಥರೇ ಹಿಡಿದು ಧರ್ಮದೇಟು ನೀಡಿ ಬಳಿಕ ಪೊಲೀಸರಿಗೊಪ್ಪಿಸಿದ ಘಟನೆ ಹೊನ್ನಾವರ ತಾಲೂಕಿನ ಮುಗಳಿ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಗಿನ ಜಾವ ಕಾರಿನಲ್ಲಿ ಬಂದಿದ್ದ ಭಟ್ಕಳ ಮೂಲದ ನಾಲ್ವರು ಯುವಕರು, ರಸ್ತೆ ಬದಿಯಲ್ಲಿದ್ದ ಗೋವುಗಳನ್ನು ಹಿಡಿದು ಕಾರಿನ ಮೂಲಕ ಸಾಗಿಸಲು ಯತ್ನಿಸಿದ್ದರು ಎನ್ನಲಾಗ್ತಿದೆ. ಇದನ್ನು ತಿಳಿದ ಸ್ಥಳೀಯ ಯುವಕರು ಸುತ್ತಮುತ್ತಲಿನವರಿಗೆ ಕರೆ ಮಾಡಿ ಆರೋಪಿಗಳನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಸಹ ಖದೀಮರಿಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಕುರಿತು ಹೊನ್ನಾವರ ತಾಲೂಕಿನ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ಕೃತ್ಯಕ್ಕೆ ಬಳಸಿದ್ದ ಕಾರನ್ನು ಸಹ ವಶಕ್ಕೆ ಪಡೆದಿದ್ದಾರೆ.