ಭಟ್ಕಳ: ಸಂಚಾರಿ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯ್ದೆ ತಾಲೂಕಿನ ಯುವಕರ ನಿದ್ದೆಗೆಡಿಸಿದೆ. ಮೊದಲೇ ಕೈಯಲ್ಲಿ ಹಣ ಇಲ್ಲದೆ ಇರುವುದು ಒಂದು ಕಡೆಯಾದರೆ, ಸಾವಿರಾರು ರೂಪಾಯಿ ದಂಡ ವಿಧಿಸಿದರೆ ಮುಂದೆ ವಾಹನ ಚಲಾವಣೆ ಕಷ್ಟಕರ ಎಂದುಕೊಂಡಿರುವ ಯುವಕರು ಹೊಸ ಉಪಾಯವೊಂದನ್ನು ಕಂಡುಕೊಂಡಿದ್ದಾರಂತೆ.
ಮೊದಲಿನಿಂದ ವಿಶೇಷ ಟ್ರಾಫಿಕ್ ವ್ಯವಸ್ಥೆ ಇಲ್ಲ. ಪೊಲೀಸರು ಆಗೊಮ್ಮೆ ಈಗೊಮ್ಮೆ ರಸ್ತೆಯಲ್ಲಿ ಅಡ್ಡ ನಿಂತು ವಾಹನ ನಿಲ್ಲಿಸಿ ದಂಡ ಹಾಕುವುದು ನಡೆದುಕೊಂಡು ಬಂದಿದೆ. ಈಗ ದೊಡ್ಡ ಮೊತ್ತದ ದಂಡದ ಕಾರಣ ಯಾವ ರಸ್ತೆಯಲ್ಲಿ ಪೊಲೀಸರು ಅಡ್ಡ ನಿಂತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಕೆಲ ದಿನಗಳ ಹಿಂದಷ್ಟೇ ಭಟ್ಕಳ ಸಹಾರ ಭಾಗದ ಹೆಚ್ಚಿನ ವಾಟ್ಸಪ್ ಗ್ರೂಪ್ಗಳಲ್ಲಿ ಚಾಲ್ತಿಗೆ ಬಂದು ಬಿಟ್ಟಿವೆ. ಪೊಲೀಸರ ಚೆಕ್ಕಿಂಗ್ ಮಾಹಿತಿ ಕೂಡಲೇ ವಾಟ್ಸಪ್ಗೆ ಅಪ್ಲೋಡ್ ಆಗುತ್ತದೆಯಂತೆ.
ಅದರ ಆಧಾರದ ಮೇಲೆ ಭಟ್ಕಳದ ಪೇಟೆಯಲ್ಲಿ ಓಡಾಡುವ ವಾಹನ ಸವಾರರ ರಸ್ತೆ ದಿಕ್ಕು ಬದಲಾಗುತ್ತಿದೆ. ವಾಹನ ತಪಾಸಣೆಯ ಮಾಹಿತಿಯನ್ನು ವಾಟ್ಸಪ್ ಗ್ರೂಪ್ಗಳಿಗೆ ಹರಿಬಿಟ್ಟು ಯುವಕರನ್ನು ಕೆಲವರು ಎಚ್ಚರಿಸುತ್ತಿದ್ದಾರೆ. ತಪಾಸಣೆ ಮುಗಿದ ಕೂಡಲೇ ಆ ಮಾಹಿತಿ ಈ ವಾಟ್ಸಪ್ ಗ್ರೂಪ್ಗಳಲ್ಲಿ ಲಭ್ಯವಾಗುತ್ತವೆ ಎನ್ನಲಾಗುತ್ತಿದೆ. ನಿಯಮ ಅನುಷ್ಠಾನಕ್ಕೆ ಬಂದ ವಾರದ ಒಳಗೆ ಇಂತಹ ಉಪಾಯ ಹೊಳೆದಿದ್ದು ಸಾರ್ವಜನಿಕರಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ.
ಈ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು ಹೇಗೆ?
ಭಟ್ಕಳ ತಾಲೂಕಿನಲ್ಲಿ ವಾಟ್ಸಪ್ ಗ್ರೂಪ್ಗಳಲ್ಲಿ ವಾಹನ ತಪಾಸಣೆ ಮಾಹಿತಿ ಸೋರಿಕೆಯಾಗುತ್ತಿರುವುದನ್ನು ಗಮನಿಸಿ ಕೆಎಸ್ಪಿ ಆನ್ಲೈನ್ ಮೂಲಕ ಓರ್ವ ದೂರು ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ. ಹೀಗಾಗಿ ಈ ಗ್ರೂಪ್ನ ಅಡ್ಮಿನ್ ಹಾಗೂ ಸದಸ್ಯರನ್ನು ಪತ್ತೆ ಹಚ್ಚುವಲ್ಲಿ ನಗರ ಠಾಣೆ ಪೊಲೀಸರು ಮುಂದಾಗಿದ್ದಾರೆ. ಈ ವಿಷಯ ತಿಳಿದ ವಾಟ್ಸಪ್ ಗ್ರೂಪ್ನ ಸದಸ್ಯರು ಗ್ರೂಪ್ನಿಂದ ಹೊರಹೋಗುತ್ತಿದ್ದಾರೆ ಎನ್ನಲಾಗಿದೆ.