ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿನ ಅಭಿಲೇಖಾಲಯ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಮೊದಲ ಮಹಡಿಯ ಕೆಸ್ವಾನ್ ವಿಡಿಯೋ ಕಾನ್ಫರೆನ್ಸ್ ಹಾಲ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆ ಕುರಿತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗ್ ಎಂ. ಪ್ರತಿಕ್ರಿಯಿಸಿದ್ದು, ಕೆಳ ಅಂತಸ್ತಿನ ಕೊಠಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ತಗುಲಿದ್ದು, ದಾಖಲೆಗಳು ಸುರಕ್ಷಿತವಾಗಿವೆ ಎಂದು ತಿಳಿಸಿದ್ದಾರೆ.
ಬೆಳಗ್ಗೆ 8.45ರ ಸುಮಾರಿಗೆ ಇದ್ದಕ್ಕಿದ್ದಂತೆ ಕಟ್ಟಡದೊಳಗೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಎರಡು ಅಂತಸ್ತಿನವರೆಗೂ ಬೆಂಕಿ ವ್ಯಾಪಿಸಿತು. ತಕ್ಷಣವೇ ಸ್ಥಳೀಯರ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮ ವಹಿಸಿದ್ದರಾದರೂ ಒಂದು ಟ್ಯಾಂಕರ್ ನೀರು ಖಾಲಿಯಾದರೂ ಬೆಂಕಿ ಮಾತ್ರ ನಂದಿರಲಿಲ್ಲ. ಕೊನೆಗೆ ಮತ್ತೊಂದು ವಾಹನವನ್ನು ಸ್ಥಳಕ್ಕೆ ಕರೆಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಲಾಗಿದೆ.
ಕಟ್ಟಡದ ಮೊದಲ ಮಹಡಿಯಲ್ಲಿ ಕೆಸ್ವಾನ್ ವಿಡಿಯೋ ಕಾನ್ಫರೆನ್ಸ್ ಹಾಲ್ ಇದ್ದು, ಈ ಸಭಾಂಗಣ ಸಂಪೂರ್ಣ ಪ್ಲೈವುಡ್ನಿಂದ ಕೂಡಿದ್ದಾಗಿದೆ. ಈ ಕಾರಣದಿಂದಾಗಿ ಬೆಂಕಿ ಹೆಚ್ಚಿನ ಪ್ರಮಾಣದಲ್ಲಿ ಹೊತ್ತಿಕೊಂಡಿದೆ. ಮೊದಲ ಅಂತಸ್ತಿನಲ್ಲಿ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಕಚೇರಿ ಹಾಗೂ ಅಕ್ಷರ ದಾಸೋಹ ಕಚೇರಿ ಇದ್ದು, ಮೂರನೇ ಅಂತಸ್ತಿನಲ್ಲಿ ದಾಖಲೆಗಳ ಕೊಠಡಿ ಇದೆ. ಪ್ರಾಥಮಿಕ ಮಾಹಿತಿ ಪ್ರಕಾರ ಮೂರು ಅಂತಸ್ತಿಗೂ ಬೆಂಕಿಯ ಜ್ವಾಲೆ ಆವರಿಸಿದೆಯಾದರೂ ರೆಕಾರ್ಡ್ಸ್ ರೂಮಿಗೆ ಬೆಂಕಿ ತಗುಲಿಲ್ಲ ಎನ್ನಲಾಗಿದೆ.
ಕಳೆದ ಮೂರೂವರೆ ವರ್ಷಗಳ ಹಿಂದೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಕೊಠಡಿಯಲ್ಲೂ ಬೆಂಕಿ ಅವಘಡ ಸಂಭವಿಸಿತ್ತು. ಇನ್ನು ಘಟನೆ ಕುರಿತು ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗ್ ಎಂ. ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಓದಿ: ಉ.ಕ ಜಿಲ್ಲಾ ಪಂಚಾಯಿತಿ ಕಟ್ಟಡದಲ್ಲಿ ಅಗ್ನಿ ಅವಘಡ: ಬೆಂಕಿ ನಂದಿಸಲು ಹರಸಾಹಸ