ಕಾರವಾರ : ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಉಳ್ಳೂರು ಮಠ ಸಮೀಪ ಇಂದು ಒಂದೇ ದಿನದಲ್ಲಿ ಕಾಣಿಸಿಕೊಂಡ ಮೂರು ಕಾಳಿಂಗ ಸರ್ಪಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ರಕ್ಷಿಸಿದ ಘಟನೆ ನಡೆದಿದೆ. ಉಳ್ಳೂರು ಮಠ ಸಮೀಪ ಅಬ್ಬೊಳ್ಳಿಯ ರಾಮನಾಥ ನಾಯ್ಕ್ ಅವರ ಮನೆಯ ಬಾವಿಯಲ್ಲಿ ಒಂದು ಕಾಳಿಂಗ ಸರ್ಪ ಬಿದ್ದಿದೆ ಎಂದು ಮಾಹಿತಿ ದೊರೆತ ಮೇರೆಗೆ, ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಸಿಬ್ಬಂದಿ ಬರೋಬ್ಬರಿ 3 ಕಾಳಿಂಗ ಸರ್ಪವನ್ನು ರಕ್ಷಿಸಿ ಕಾಡಿಗೆ ಬಿಟ್ಟು ಬಂದಿದ್ದಾರೆ.
ಅಬ್ಬೋಳಿಯ ರಾಮನಾಥ ನಾಯ್ಕ ಅವರ ಮನೆಯ ಬಾವಿಯಲ್ಲಿ ಕಾಳಿಂಗ ಸರ್ಪ ಬಿದ್ದಿರುವ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಥಳಕ್ಕೆ ಧಾವಿಸಿ, ಕಾಳಿಂಗ ಸರ್ಪವನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟು ಬರುವುದರೊಳಗೆ ಅದೇ ಬಾವಿಯಲ್ಲಿ ಇನ್ನೊಂದು ಕಾಳಿಂಗ ಬಿದ್ದಿತ್ತು.
ಮತ್ತೆ ಸ್ಥಳಕ್ಕೆ ತೆರಳಿ ಬಾವಿಯಲ್ಲಿದ್ದ ಕಾಳಿಂಗವನ್ನು ರಕ್ಷಿಸಿ ಒಂದೆರಡು ಕಿ.ಮೀ ಕ್ರಮಿಸುವಷ್ಟರಲ್ಲಿ ಅದೇ ಮನೆಯ ಕರೆ ಪಕ್ಕದ ಕಾಂಪೌಡ್‌ನಲ್ಲಿ ಇನ್ನೊಂದು ಕಾಳಿಂಗ ಸರ್ಪವಿದೆ ಎಂದು ಜನರೆಲ್ಲಾ ಭಯಭೀತರಾಗಿ ಒಂದೆಡೆ ಸೇರಿದ್ದರು. ವಿಷಯ ತಿಳಿದ ನಂತರ ಸ್ಥಳಕ್ಕೆ ತೆರಳಿ ಅರಣ್ಯ ಇಲಾಖೆ ಸಿಬ್ಬಂದಿ ಆ ಕಾಳಿಂಗವನ್ನು ರಕ್ಷಿಸಿ ಅರಣ್ಯದಲ್ಲಿ ಬಿಟ್ಟಿದ್ದಾರೆ.
3 ಕಾಳಿಂಗಗಳಲ್ಲಿ 2 ಗಂಡು ಹಾಗೂ ಒಂದು ಹೆಣ್ಣು. ಈ ಹಾವುಗಳು ಮಿಲನ ಕ್ರಿಯೆಯಲ್ಲಿ ತೊಡಗಲು ಆಗಮಿಸಿವೆ ಎಂದು ಅಂದಾಜಿಸಲಾಗಿದೆ. ಮಿಲನಕ್ಕೆ ಸಿದ್ಧವಾದ ಹೆಣ್ಣು ಹಾವುಗಳು ಫೆರಾಮೋನ್ (ಗಂಡು ಹಾವುಗಳನ್ನು ಆಕರ್ಷಿಸುವ ದ್ರವ) ಸ್ರವಿಸುತ್ತದೆ. ಇದರ ವಾಸನೆಗೆ ಮಿಲನಕ್ಕೆ ಸಿದ್ಧವಾಗಿದ್ದ ಹಲವು ಗಂಡು ಹಾವುಗಳು ಬರುತ್ತದೆ.
ಬೇರೆ ಬೇರೆ ಪ್ರದೇಶದಿಂದ ತನ್ನ ಗಡಿ ದಾಟಿಯೂ ಸಹ ಸರ್ಪಗಳು ಬರುವುದಿದೆ. ಈ ವೇಳೆ ಗಂಡು ಹಾವುಗಳ ನಡುವೆ ಹೆಣ್ಣು ಹಾವುಗಳಿಗಾಗಿ ಕಾಳಗ ನಡೆದು, ಗೆದ್ದ ಬಲಿಷ್ಠ ಹಾವು ಹೆಣ್ಣು ಹಾವನ್ನು ಸೇರುತ್ತದೆ. ನಂತರ ಮತ್ತೆ ತನ್ನ ಮೂಲ ಸ್ಥಾನಕ್ಕೆ ಹೋಗಿ ನೆಲೆಸುತ್ತದೆ. ಇಂತಹ ಸಂದರ್ಭದಲ್ಲಿ ತೊಂದರೆ ಮಾಡಿದರೆ, ಆ ವರ್ಷ ಹಾವುಗಳ ಮಿಲನಕ್ಕೆ ಧಕ್ಕೆಯಾಗಿ ಸಂತಾನೋತ್ಪತ್ತಿಯಾಗದೇ ನೇರವಾಗಿ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಮಿಲನದ ಸಂದರ್ಭದಲ್ಲಿ ಅನಾವಶ್ಯಕವಾಗಿ ಹಾವುಗಳನ್ನು ಹಿಡಿಸದೇ ಇರುವುದೇ ಒಳ್ಳೆಯದು ಎಂದು ಆರ್‌ಎಫ್‌ಒ ರಾಜೇಶ್ ಕೊಚರೇಕರ್ ಮಾಹಿತಿ ನೀಡಿದ್ದಾರೆ.
ಕುಮಟಾ ಆರ್‌ಎಫಒ ಎಸ್.ಟಿ ಪಟಗಾರ್ ಅವರ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ರಾಘವೇಂದ್ರ ನಾಯ್ಕ, ಗಾರ್ಡ್ ರಾಘವೇಂದ್ರ ನಾಯ್ಕ ಹಾಗೂ ಮಹೇಶ್, ವಾಚರ್ ಸುರೇಶ್ ನಾಯ್ಕ, ವಿನಸಯಕ ನಾಯ್ಕ ವಾಹನ ಚಾಲಕರಾದ ಕಮಲಾಕರ ಭಂಡಾರಿ, ಮಹೇಶ್ ಮುಕ್ರಿ ಕಾಳಿಂಗ ರಕ್ಷಣೆಗೆ ಸಹಕರಿಸಿದರು.
ಇದನ್ನೂ ಓದಿ: ಜರ್ಮನಿ ವಿರುದ್ಧ 'ಗೆಲುವಿನ ಗೋಲು' ದಾಖಲಿಸಿದ ಮುಮ್ತಾಜ್ ಅಮ್ಮನ ದಿಲ್‌ಖುಷ್!