ಉತ್ತರಕನ್ನಡ: ಎರಡನೇ ಹಂತದ ಲಾಕ್ಡೌನ್ ಆರಂಭಗೊಂಡಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಮನೆ ಮನೆಗೆ ಅಗತ್ಯ ವಸ್ತುಗಳ ಪೂರೈಕೆ ಮಾಡುವ ವ್ಯಾಪಾರಸ್ಥರಿಗೆ ಪಾಸ್ಗಳನ್ನು ನವೀಕರಣಗೊಳಿಸಲಾಗುತ್ತಿದೆ. ಈ ಪಾಸ್ ಪಡೆಯುವುದಕ್ಕಾಗಿಯೇ ಕಾರವಾರ ನಗರಸಭೆಯಲ್ಲಿ ನೂಕುನುಗ್ಗಲು ಉಂಟಾಗಿದೆ.
ಜಗತ್ತಿನಾದ್ಯಂತ ಕೊರೊನಾ ಮಹಾಮಾರಿ ತನ್ನ ಕಬಂಧ ಬಾಹು ಚಾಚುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದಾದ್ಯಂತ ಏಪ್ರಿಲ್ 14ರವರೆಗೆ ಘೋಷಿಸಿದ್ದ ಲಾಕ್ಡೌನ್ ಮುಕ್ತಾಯವಾಗಿದ್ದು, ಎರಡನೇ ಹಂತದ ಲಾಕ್ಡೌನ್ ಆರಂಭಗೊಂಡಿದೆ. ಈ ಅವಧಿಯಲ್ಲಿ ಜನರ ಮನೆ-ಮನೆಗೆ ತೆರಳಿ ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ವ್ಯಾಪಾರಸ್ಥರಿಗೆ ಅವಶ್ಯವಿರುವ ಪಾಸ್ ನಗರಸಭೆಯಿಂದ ನವೀಕರಿಸಿ ನೀಡಲಾಗುತ್ತದೆ. ಅದರಂತೆ ಇಂದು ಪಾಸ್ಗಳನ್ನು ನವೀಕರಣ ಮಾಡಿಕೊಳ್ಳುವಂತೆ ನಗರಸಭೆ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ನೂರಾರು ವ್ಯಾಪಾರಸ್ಥರು ನಗರಸಭೆಯ ಎದುರು ಜಮಾವಣೆಗೊಂಡಿದ್ದರು.
ಕೆಲವರು ದೂರ ನಿಂತಿದ್ದರೆ, ಇನ್ನು ಕೆಲವರು ಪಾಸ್ಗಾಗಿ ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೆ ವಾಗ್ವಾದಕ್ಕೂ ಇಳಿದಿದ್ದರು. ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಗುಂಪನ್ನ ಚದುರಿಸಿ ಸರತಿ ಸಾಲಿನಲ್ಲಿ ಬರುವಂತೆ ಸೂಚಿಸಿದರು. ಉಪ ವಿಭಾಗಾಧಿಕಾರಿ ಪ್ರಿಯಾಂಕಾ ಕೂಡ ಸ್ಥಳಕ್ಕೆ ತೆರಳಿ, ಪರಿಸ್ಥಿತಿ ಪರಿಶೀಲಿಸಿ ತರಕಾರಿ, ಹಣ್ಣು, ಇತರೆ ಅಗತ್ಯ ವಸ್ತುಗಳನ್ನು ಪೂರೈಸುವವರಿಗೆ ಪ್ರತ್ಯೇಕವಾಗಿ ನೀಡುವುದಾಗಿ ತಿಳಿಸಿ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡು ಪಾಸ್ ಪಡೆಯುವಂತೆ ಸೂಚಿಸಿದರು.