ಭಟ್ಕಳ(ಉತ್ತರ ಕನ್ನಡ) : ಕೈ ಮುರಿದುಕೊಂಡ ಬಾಲಕಿ ತಾನು ಚಿಕಿತ್ಸೆ ಪಡೆದುಕೊಳ್ಳುವ ಸಲುವಾಗಿ ಸುಳ್ಳು ಹೇಳಿ ಸಿಕ್ಕಿಬಿದ್ದು, ಈಗ ಕ್ವಾರಂಟೈನ್ಗೆ ಒಳಗಾಗಿದ್ದಾಳೆ.
ಭಟ್ಕಳದ ಕೊರೊನಾ ಹಾಟ್ಸ್ಪಾಟ್ ಪ್ರದೇಶದಲ್ಲಿ ಬಾಲಕಿಯೊರ್ವಳು ಕೈ ಮೂಳೆ ಮೂರಿದುಕೊಂಡಿದ್ದಳು. ಈ ಹಿನ್ನೆಲೆ ಆಕೆಯನ್ನು ಮೊದಲು ಭಟ್ಕಳದಿಂದ ಕುಂದಾಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಪ್ರಕರಣ ಗಂಭೀರವಾದ್ದರಿಂದ ದೊಡ್ಡ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದಾರೆ. ಈ ಹಿನ್ನೆಲೆ ಕುಂದಾಪುರದಿಂದ ಮಂಗಳೂರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ.
ಸುಳ್ಳು ಹೇಳಿ ಸಿಕ್ಕಿಬಿದ್ದರು:
ಮಂಗಳೂರಿಗೆ ಹೋದಾಗ ಎಲ್ಲಿಂದ ಬಂದಿದ್ದೀರಿ ಎಂದು ವೈದ್ಯರು ಕೇಳಿದ್ದಕ್ಕೆ ತಾವು ಕುಂದಾಪುರದಿಂದ ಬಂದಿದ್ದೇವೆ ಎಂದು ಹೇಳಿದ್ದಾರೆ. ಇದಾದ ನಂತರ ಗುರುತಿನ ಚೀಟಿಯನ್ನು ನೀಡಬೇಕಾದ ಹಿನ್ನೆಲೆ ಆಧಾರ್ ಕಾರ್ಡ್ ನೀಡಿದಾಗ ಭಟ್ಕಳ ಮೂಲದವರು ಎಂಬ ಬಗ್ಗೆ ವೈದ್ಯರಿಗೆ ತಿಳಿದಿದೆ.
ತಕ್ಷಣ ಎಚ್ಚೆತ್ತ ವೈದ್ಯರು ಹಾಗೂ ಸಿಬ್ಬಂದಿ ಸ್ಥಳೀಯ ಆಡಳಿತಕ್ಕೆ ದೂರು ನೀಡಿದ್ದಾರೆ. ನಂತರ ರೋಗಿ ಸೇರಿ ಆಕೆಯ ಜೊತೆ ಬಂದಿದ್ದ ಮೂವರ ಗಂಟಲು ದ್ರವವನ್ನು ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೆ, ವರದಿ ಬರುವವರೆಗೂ ಇವರನ್ನು ಕ್ವಾರಂಟೈನ್ನಲ್ಲಿ ಇರಿಸಲಾಗಿದೆ.
ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ಈ ಸಂಬಂಧ ಪ್ರತಿಕ್ರಿಯಿಸಿ, ಇಂತಹ ಸಂದರ್ಭದಲ್ಲಿ ಸುಳ್ಳು ಹೇಳಿ ಚಿಕಿತ್ಸೆ ಪಡೆದಿದ್ದರೆ ಅದು ಗಂಭೀರ ಅಪರಾಧ. ಪೊಲೀಸ್ ಇಲಾಖೆ ಪಾಸ್ ನೀಡಿಲ್ಲ ಎನ್ನುತ್ತಿದೆ. ಹಾಗಾದರೆ ಅವರು ಹೇಗೆ ಮಂಗಳೂರಿಗೆ ತಲುಪಿದರು ತಿಳಿದುಕೊಳ್ಳಬೇಕಿದೆ. ಒಂದು ವೇಳೆ ಅಲ್ಲಿಯ ಜಿಲ್ಲಾಡಳಿತದಿಂದ ದೂರು ಬಂದರೆ ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.