ಕಾರವಾರ: ನಿತ್ಯ ಏರುತ್ತಿರುವ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ದರದಿಂದಾಗಿ ಜನಸಾಮಾನ್ಯರು ಹೈರಾಣಾಗುವಂತಾಗಿದೆ. ರಷ್ಯಾ- ಉಕ್ರೇನ್ ನಡುವಿನ ಯುದ್ಧ, ಅಕಾಲಿಕ ಮಳೆ, ಚಂಡಮಾರುತದ ಪರಿಣಾಮ ಈ ಬೆಲೆ ಏರಿಕೆಯ ಹೆಸರಿನಲ್ಲಿ ಜನರನ್ನು ಸಂಕಷ್ಟಕ್ಕೆ ನೂಕುತ್ತಿದ್ದರೆ, ಇವುಗಳನ್ನು ಹದ್ದುಬಸ್ತಿಗೆ ತರಬೇಕಿದ್ದ ಆಳುವ ಸರ್ಕಾರಗಳ ದ್ವಂದ್ವ ನೀತಿಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಅಕಾಲಿಕ ಮಳೆ, ಚಂಡಮಾರುತದ ಪರಿಣಾಮವಾಗಿ ತರಕಾರಿ ಮಾರುಕಟ್ಟೆಯಲ್ಲಿ ಮೆಣಸಿನ ದರ ಮೂರುಪಟ್ಟು ಹೆಚ್ಚಾಗಿದೆ. ಎರಡು ವಾರಗಳ ಹಿಂದೆ ಕೆಜಿಗೆ 50- 80 ರೂ. ಇದ್ದ ಮೆಣಸು, ಇಂದು 150- 200 ರೂ.ಗೆ ಮಾರಾಟವಾಗುತ್ತಿದೆ. ಹೋಲ್ಸೇಲ್ನಲ್ಲೇ ಮೆಣಸಿನ ದರ ಕಿಲೋ 150 ರೂ.ನಂತೆ ಇದ್ದು, ಇದರಿಂದಾಗಿ ತರಕಾರಿ ಅಂಗಡಿಗಳಲ್ಲಿ ಈ ದರ ಇನ್ನಷ್ಟು ಏರಿಕೆಯಾಗಿದೆ.
ಇನ್ನೊಂದೆಡೆ, ರಷ್ಯಾ- ಉಕ್ರೇನ್ ನಡುವಿನ ಯುದ್ಧದ ಪರಿಣಾಮವಾಗಿ ಏರಿಕೆಯಾಗಿದ್ದ ಅಡುಗೆ ಎಣ್ಣೆ ದರ, ಯುದ್ಧ ತಣ್ಣಗಾದರೂ ಇನ್ನೂ ಇಳಿದಿಲ್ಲ. ಲೀಟರ್ ಸನ್ ಫ್ಲವರ್ ಎಣ್ಣೆ ದೊಡ್ಡ ಮಳಿಗೆಗಳಲ್ಲಿ ಎಂಆರ್ಪಿಯಂತೆ 225 ರೂ.ಗೆ ಮಾರಾಟವಾಗುತ್ತಿದ್ದರೆ, ಸಣ್ಣಪುಟ್ಟ ಕಿರಾಣಿ ಅಂಗಡಿಗಳು ಎಂಆರ್ಪಿಗಿಂತಲೂ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿವೆ. ಸದ್ಯ ಅತಿ ಕಡಿಮೆ ಪ್ರಮಾಣದಲ್ಲಿ ಅಡುಗೆ ಎಣ್ಣೆ ಮಾರುಕಟ್ಟೆಗೆ ಪೂರೈಕಯಾಗುತ್ತಿದ್ದು, ಸೂಪರ್ ಮಾರ್ಕೆಟ್ಗಳಲ್ಲಿ ಎಣ್ಣೆಗಳನ್ನಿಡುತ್ತಿದ್ದ ಸ್ಥಳಗಳು ಖಾಲಿ ಖಾಲಿಯಾಗಿವೆ.
ಹೀಗಾಗಿ ದರ ಹೆಚ್ಚು ಹೇಳಿದರೂ ಖರೀದಿಸುವ ಅನಿವಾರ್ಯತೆ ಜನರದ್ದಾಗಿದೆ. ಮತ್ತೊಂದೆಡೆ ಫಾರಂ ಕೋಳಿಗಳ ಪೂರೈಕೆ ಕೂಡ ಕಡಿಮೆಯಾಗಿರುವ ಕಾರಣ ಕಾರವಾರದಲ್ಲಿ ಕಿಲೋ ಕೋಳಿ ಮಾಂಸ 280- 320 ರೂಪಾಯಿಗೆ ಮಾರಾಟವಾಗುತ್ತಿದೆ. ಈ ಎಲ್ಲಾ ದರ ವ್ಯತ್ಯಾಸಕ್ಕೆ ಪ್ರಮುಖ ಕಾರಣ ತೈಲ ಬೆಲೆ ಏರಿಕೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬಾವಿಗೆ ಬಿದ್ದ ಮೊಸಳೆ ರಕ್ಷಿಸಿದ ಸ್ಥಳೀಯ ಮೀನುಗಾರರ ತಂಡ
ಪೆಟ್ರೋಲ್, ಡೀಸೆಲ್, ಗ್ಯಾಸ್ ದರ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಕೂಡ ಏರಿಕೆಯಾಗುವಂತಾಗಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 84 ಪೈಸೆ, ಡೀಸೆಲ್ 78 ಪೈಸೆ ಹೆಚ್ಚಳಗೊಂಡಿದೆ. ಇಂದು ಲೀಟರ್ ಪೆಟ್ರೋಲ್ ದರ 103 ರೂ. 23 ಪೈಸೆ ಇದ್ದರೆ, ಡೀಸೆಲ್ 87 ರೂ. 40 ಪೈಸೆಗೆ ಏರಿದೆ. ಚುನಾವಣೆ ಸಮೀಪಿಸುತ್ತಿದ್ದಂತೆ ಇಳಿಕೆ ಮಾಡಿದ್ದ ಸರ್ಕಾರ, ಈಗ ಚುನಾವಣೆ ಮುಗಿಯುತ್ತಿದ್ದಂತೆ ದರ ಹೆಚ್ಚಳ ಮಾಡಿದೆ ಎಂದು ಸ್ಥಳೀಯರಾದ ಸುನೀಲ್ ನಾಯ್ಕ್ ಅಸಮಾಧಾನ ಹೊರಹಾಕುತ್ತಿದ್ದಾರೆ.