ಭಟ್ಕಳ : ಪೊಲೀಸ್ ಇಲಾಖೆಯ ಕಾನೂನುಗಳು ಹಬ್ಬ ಹರಿದಿನಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಡೆ-ತಡೆ ಎಂದುಕೊಳ್ಳದೇ ಅದು ನಿಮ್ಮ ಒಳಿತಿಗೆ ಎಂದು ಭಾವಿಸಿ ಇಲಾಖೆಗೆ ಅನುಕೂಲಕರವಾಗುವ ರೀತಿಯಲ್ಲಿ ಸಂಭ್ರಮದಿಂದ ಹಬ್ಬ ಆಚರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹೇಳಿದರು.
ಭಟ್ಕಳದ ಅರ್ಬನ್ ಬ್ಯಾಂಕ್ ಸಭಾಭವನದಲ್ಲಿ ಗೌರಿ ಗಣೇಶ ಹಬ್ಬದ ನಿಮಿತ್ತ ನಿನ್ನೆ ಸಂಜೆ ಪೊಲೀಸ್ ಇಲಾಖೆ ವತಿಯಿಂದ ಆಯೋಜಿಸಲಾದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, "ಈ ಬಾರಿ ಸಾರ್ವಜನಿಕವಾಗಿ ಗಣೇಶೋತ್ಸವ ಕಮಿಟಿಗಳಿರುವ ಜಾಗದಲ್ಲಿ ಕಡ್ಡಾಯವಾಗಿ ಸಿಸಿಟಿವಿ ಹಾಕಲೇಬೇಕು. ಅಗತ್ಯ ಬಿದ್ದಲ್ಲಿ ಸಿಸಿಟಿವಿ ಅಳವಡಿಕೆಗೆ ಇಲಾಖೆಯು ಸಹಕರಿಸಲಿದೆ. ಹಾಗೆಯೇ, ಗಣೇಶನ ಕೂರಿಸುವ ಜಾಗದಲ್ಲಿ ಬೆಂಕಿ ನಂದಿಸುವ ಸಿಲಿಂಡರ್ ಇಟ್ಟುಕೊಳ್ಳಬೇಕು. ಅದರಂತೆ ಗಣೇಶ ಮಂಡಳಿ ಆಯೋಜಕರು ಅಥವಾ ಅವರ ಪರವಾಗಿ ಓರ್ವರನ್ನು ಆಯಾ ಮಂಡಳಿಗಳಿರುವ ಜಾಗದಲ್ಲಿ ನೇಮಿಸಬೇಕು. ಮೂರ್ತಿ ನಿಮಜ್ಜನ ಮೆರವಣಿಗೆಯಲ್ಲಿಯೂ ಸಹ ಅಹಿತಕರ ಘಟನೆ ನಡೆಯದಂತೆ ಗಮನ ಹರಿಸಬೇಕು" ಎಂದರು.
ನಂತರ ಮಾತನಾಡಿದ ಡಿವೈಎಸ್ಪಿ ಕೆ.ಶ್ರೀಕಾಂತ್, "ತಾಲೂಕಿನಲ್ಲಿ ಯಾವೆಲ್ಲಾ ಕಡೆ ಸಾರ್ವಜನಿಕವಾಗಿ ಗಣಪತಿ ಕೂರಿಸಲಾಗುತ್ತದೆ ಎಂಬ ಬಗ್ಗೆ ಪೊಲೀಸ್ ಇಲಾಖೆಗೆ ಮಂಡಳಿಯವರು ಮಾಹಿತಿ ನೀಡಬೇಕು. ಮೈಕ್ ಅಳವಡಿಕೆ ಸೇರಿದಂತೆ ಮಂಡಳಿಯಿಂದ ನಡೆಸಲಾಗುವ ವಿವಿಧ ಕಾರ್ಯಕ್ರಮಗಳ ಪಟ್ಟಿಯನ್ನು ಪೊಲೀಸ್ ಇಲಾಖೆಗೆ ನೀಡಿದ್ದಲ್ಲಿ ಬಂದೋಬಸ್ತ್ಗೆ ಅಗತ್ಯ ಕ್ರಮ ತೆಗೆದುಕೊಳ್ಳಲು ಸಾಧ್ಯ. ಇನ್ನಿತರೆ ಪರವಾನಗಿಗೆ ಮಂಡಳಿಯು ಮುಂಚಿತವಾಗಿ ಸಿದ್ಧರಿರಬೇಕು. ಡಿಜೆ ಅಳವಡಿಕೆಗೆ ಪೊಲೀಸ್ ಇಲಾಖೆಯಿಂದ ಅನುಮತಿಯಿಲ್ಲ. ಅದರಂತೆ, ಗಣೇಶನ ಕೂರಿಸುವ ಜಾಗದಲ್ಲಿ ಅಥವಾ ಬೇರೆ ಕಡೆ ಹಾಕಲಾಗುವ ಪ್ಲೆಕ್ಸ್ ಮತ್ತು ಬ್ಯಾನರ್ಗಳಿಗೆ ಪುರಸಭೆ ಅಥವಾ ಪಟ್ಟಣ ಪಂಚಾಯತ್ನಿಂದ ಅನುಮತಿ ತೆಗೆದುಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಇದನ್ನೂ ಓದಿ : ಒಂದೇ ಕುಟುಂಬದ 15 ಮಂದಿಯಿಂದ ಪರಿಸರಸ್ನೇಹಿ ಗಣಪತಿ ನಿರ್ಮಾಣ: ಗ್ರಾಹಕ ನಿಗದಿಪಡಿಸಿದ ದುಡ್ಡಿಗೆ ಮೂರ್ತಿ ಮಾರಾಟ
ತಹಶೀಲ್ದಾರ್ ತಿಪ್ಪೇಸ್ವಾಮಿ ಮಾತನಾಡಿ, 'ಹಬ್ಬವನ್ನು ಕಿರಿಕಿರಿಯಾಗದಂತೆ ಸಂತೋಷದಿಂದ ಮಾಡಬೇಕು. ಸರ್ಕಾರದ ಸುತ್ತೋಲೆಯಂತೆ ಪಿಒಪಿ ಗಣಪತಿ ಬಳಕೆ ಹಾಗೂ ಅತಿಯಾಗಿ ಬಣ್ಣ ಬಳಿದ ಗಣೇಶ ಮೂರ್ತಿ ಮಾರುವುದು, ಖರೀದಿಸುವುದು ನಿಷೇಧ. ಗಣೇಶನನ್ನು ಕೂರಿಸುವ ಸ್ಥಳದಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದಲ್ಲಿ ನಮ್ಮ ಪರಿಸರಕ್ಕೆ ಉತ್ತಮ ಎಂದು ಹೇಳಿದರು. ನಂತರ ಮುಸ್ಲಿಂ ಸಮುದಾಯದ ಮುಖಂಡರಾದ ಮುನೀರಿ ಹಾಗೂ ಇನಾಯತುಲ್ಲಾ ಶಾಬಂದ್ರಿ ಅವರು ಹಬ್ಬಕ್ಕೆ ಶುಭಾಶಯ ಕೋರಿದರು.
ಇದನ್ನೂ ಓದಿ : ಮಾರುಕಟ್ಟೆಗೆ ಲಗ್ಗೆಯಿಟ್ಟ ಪಿಒಪಿ ಮೂರ್ತಿಗಳು.. ಧಾರವಾಡದಲ್ಲಿ ಅಧಿಕಾರಿಗಳಿಂದ ದಾಳಿ
ಇನ್ನೊಂದೆಡೆ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್ ಅವರು ಭಟ್ಕಳಕ್ಕೆ ಬಂದು ಶಾಂತಿ ಸಭೆ ಅಧ್ಯಕ್ಷತೆ ವಹಿಸಿದ್ದರೂ ಕೂಡ ಎಲ್ಲರಿಗೂ ಆಹ್ವಾನ ನೀಡಿಲ್ಲ ಎನ್ನುವ ಆರೋಪ ಕೇಳಿಬಂದಿದ್ದು, ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಬಿಜೆಪಿ ಪಟ್ಟು: ಅಹೋರಾತ್ರಿ ಪ್ರತಿಭಟನೆಗೆ ನಿರ್ಧಾರ