ಕಾರವಾರ : ನಿನ್ನೆ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಯಿಯ ಮರಣದ ನಡುವೆಯೂ ವಿದ್ಯಾರ್ಥಿಯೋರ್ವ ಪರೀಕ್ಷೆ ಎದುರಿಸಿದರೆ, ಮತ್ತೊಂದೆಡೆ ಓರ್ವ ವಿದ್ಯಾರ್ಥಿಗಾಗಿಯೇ ಒಂದು ಬಸ್ ಬಿಟ್ಟಿರುವ ಘಟನೆ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಹೌದು, ಜೊಯಿಡಾ ತಾಲೂಕಿನ ಕ್ಯಾಸಲರಾಕ್ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ನೀಲೇಶ ಗಾಂವಕರ ಎಂಬಾತನ ತಾಯಿ ಮುಂಜಾನೆ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಬಗ್ಗೆ ಮಾಹಿತಿ ಪಡೆದ ನೋಡಲ್ ಅಧಿಕಾರಿ ರಮೇಶ್ ಗುರುನಾಥ ಚೌದರಿ, ಮುಖ್ಯ ಶಿಕ್ಷಕ ನಾಗರಾಜ ಗೌಡ, ಸಹ ಶಿಕ್ಷಕರಾದ ವಿಶಾಲಕುಮಾರ ಯಾಳಗಿ, ರವಿ ಕಾಂಬಳೆ ಮನೆಯವರೊಂದಿಗೆ ಸಮಾಲೋಚನೆ ನಡೆಸಿ ವಿದ್ಯಾರ್ಥಿಗೆ ಧೈರ್ಯ ತುಂಬಿ ಪರೀಕ್ಷೆ ಕೇಂದ್ರಕ್ಕೆ ಕರೆದುತಂದು ಪರೀಕ್ಷೆ ಬರೆಸಿದ್ದಾರೆ. ಮಾತ್ರವಲ್ಲದೆ ಬಳಿಕ ವಿದ್ಯಾರ್ಥಿಯನ್ನು ಮರಳಿ ಮನೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ಇನ್ನು ಶಿರಸಿ ತಾಲೂಕಿನ ದೇವನಹಳ್ಳಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ರೇಣುಕಾ ಗೌಡ ಎಂಬ ವಿದ್ಯಾರ್ಥಿನಿಗೆ ಪ್ರತಿದಿನ ಪರೀಕ್ಷೆ ಬರೆಯಲು ಶಿರಸಿಗೆ ಹೋಗಿ ಬರುವುದಕ್ಕೆ ಸ್ಥಳೀಯರು ವೀರೋಧ ವ್ಯಕ್ತಪಡಿಸಿದ್ದರು. ಆದರೆ, ಶಾಲೆಯ ಶಿಕ್ಷಕಿ ರೂಪಾ ನಾಯ್ಕ ಈ ವಿಷಯವನ್ನು ಜಿಲ್ಲಾಡಳಿತದ ಗಮನಕ್ಕೆ ತಂದು ತಮ್ಮ ಮನೆಯಲ್ಲಿಯೇ ವಿದ್ಯಾರ್ಥಿನಿಗೆ ವಸತಿ ವ್ಯವಸ್ಥೆ ಮಾಡಿ ನಿಲೇಕಣಿ ಸರ್ಕಾರಿ ಪ್ರೌಢ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಹೋಗಿ ಪರೀಕ್ಷೆ ಬರೆಯಲು ಅನುವು ಮಾಡಿ ಕೊಟ್ಟಿದ್ದು, ವಿದ್ಯಾರ್ಥಿನಿಯೂ ನಿರ್ಭಯದಿಂದ ಪರೀಕ್ಷೆ ಎದುರಿಸಿದ್ದಾಳೆ
ಅದೇ ರೀತಿ ಇದೇ ಶಾಲೆಯ 42 ವಿದ್ಯಾರ್ಥಿಗಳಿಗೆ ಜಿಲ್ಲಾಡಳಿತ ಬಸ್ ವ್ಯವಸ್ಥೆ ಕಲ್ಪಿಸಿತ್ತು. ಆದರೆ, ಕೆಲವೊಂದು ವಿದ್ಯಾರ್ಥಿಗಳು ಪಾಲಕರೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದರಿಂದ ಉಳಿದ 30 ವಿದ್ಯಾರ್ಥಿಗಳಿಗೆ ಒಂದು ಬಸ್ ವ್ಯವಸ್ಥೆಯನ್ನು ಮಾಡಲಾಯಿತು. ಇದೆ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಕುಮಾರ ಶ್ರೀಧರ ಗೌಡನಿಗೆ ಶಿರಸಿಯ ಲಯನ್ಸ್ ಪ್ರೌಢ ಶಾಲೆಯಲ್ಲಿ ಪರೀಕ್ಷಾ ಕೇಂದ್ರವಿದ್ದು, ಒಬ್ಬನೇ ವಿದ್ಯಾರ್ಥಿಯಾಗಿದ್ದರೂ ಕೂಡಾ ಈತನಿಗಾಗಿ ಪ್ರತ್ಯೇಕ ಒಂದು ಬಸ್ ವ್ಯವಸ್ಥೆ ಮಾಡಿ ಪರೀಕ್ಷೆ ಬರೆಯಲು ಜಿಲ್ಲಾಡಳಿತ ಅನುವು ಮಾಡಿಕೊಟ್ಟಿದೆ.