ಕಾರವಾರ: ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿವೋರ್ವ ತಾಲೂಕಿನ ಮುಡಗೇರಿಯ ಅಂಗಡಿ ಗ್ರಾಮದ ತೆರೆದ ಬಾವಿಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಸಣ್ಣ ಮುಡಗೇರಿಯ ದಾಮೋದರ ನಾಯ್ಕ (56) ಮೃತಪಟ್ಟವರು. ಇವರು ಮೇ 26ರಿಂದ ಅವರು ಕಾಣೆಯಾಗಿದ್ದರು. ಆದರೆ ನಿನ್ನೆ ಅಂಗಡಿ ಗ್ರಾಮದಲ್ಲಿ ಪಾಳು ಬಿದ್ದ ಜಾಗದಲ್ಲಿದ್ದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಭಾನುವಾರ ಸ್ಥಳೀಯರೊಬ್ಬರ ಗಮನಕ್ಕೆ ಬಂದು ಪರಿಶೀಲಿಸಿದಾಗ ದಾಮೋದರ ಅವರ ಶವ ದೊರೆತಿದೆ.
ದೇಹ ಕೊಳೆತ ಸ್ಥಿತಿಯಲ್ಲಿದ್ದು, ಕೆಲ ದಿನಗಳ ಹಿಂದೆಯೇ ದಾಮೋದರ ಬಾವಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.