ಭಟ್ಕಳ (ಉತ್ತರ ಕನ್ನಡ): ತಾಲೂಕಿನ ಸುಪ್ರಸಿದ್ದ ಮಾರಿ ದೇವಿ ಹಬ್ಬ ಗುರುವಾರ ಸಂಜೆ ಕೊರೊನಾ ಭಯದ ನಡುವೆಯೇ ಸರಳವಾಗಿ ನಡೆಯಿತು. ಮೊದಲ ಬಾರಿಗೆ ತೆರೆದ ವಾಹನದಲ್ಲಿ ದೇವಸ್ಥಾನದಿಂದ ಜಾಲಿಕೋಡಿ ಸಮುದ್ರ ತೀರದ ತನಕ ಮಾರಿ ಮೂರ್ತಿಯನ್ನು ಹೊತ್ತು ಮೆರವಣಿಗೆ ಮಾಡಿ, ಬಳಿಕ ವಿಸರ್ಜಿಸುವ ಮೂಲಕ ಸಂಪನ್ನಗೊಳಿಸಲಾಯಿತು.
ವಿಪರೀತ ಮಳೆಯ ನಡುವೆಯೇ ಮಾರಿ ದೇವಿಗೆ ಭಕ್ತರು ಜಯಘೋಷ ಕೂಗುತ್ತ ಮೆರವಣಿಗೆಯಲ್ಲಿ ಸಾಗಿ ಬಂದರು. ಇಲ್ಲಿನ ಹನುಮಾನ ನಗರದಲ್ಲಿ ಮಾರಿದೇವಿ ಮೆರವಣಿಗೆ ಸಾಗಿ ಬಂದಾಗ ಊರಿನ ಜನರು ರಸ್ತೆಯ ಪಕ್ಕದಲ್ಲಿ ಕೋಳಿ ಬಲಿ ನೀಡಿ ರೋಗ ರುಜಿನಗಳ ನಿರ್ಮೂಲನೆ ಮಾಡುವಂತೆ ಬೇಡಿಕೊಂಡು ದೇವಿಯ ಹೂವಿನ ಪ್ರಸಾದ ಸ್ವೀಕರಿಸಿದರು.
ಮಾರಿಜಾತ್ರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ದೇವಿಯನ್ನು ತೆರೆದ ವಾಹನದಲ್ಲಿ ವಿಸರ್ಜನಾ ಮೆರವಣಿಗೆ ನಡೆಸಲಾಯಿತು. ಭಕ್ತರು ತಮ್ಮ ತಮ್ಮ ಮನೆಯಲ್ಲಿಯೇ ಮಾರಿ ದೇವಿಯನ್ನು ಸ್ಮರಿಸಿದರು. ಇನ್ನು ಕೆಲವರು ರಸ್ತೆಯ ಬಳಿ ಬಂದು ದೇವಿಗೆ ಕೈ ಮುಗಿದರು.
ಇದಕ್ಕೂ ಪೂರ್ವದಲ್ಲಿ ಮುಂಜಾನೆ ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ಮೊದಲು ಥರ್ಮಲ್ ಸ್ಕ್ರೀನಿಂಗ್ ಮಾಡಿಸಿ ನಂತರ ಸಾನಿಟೈಸರ್ ಸಿಂಪಡಿಸಲಾಗಿತ್ತು.
ಮಧ್ಯಾಹ್ನ 4ಗಂಟೆ ಸುಮಾರಿಗೆ ಸ್ವಯಂ ಸೇವಕರು ಹಾಗೂ ಆಡಳಿತ ಮಂಡಳಿ ಸದಸ್ಯರ ಸಮ್ಮುಖದಲ್ಲಿ ಮಾರಿಯ ಮೂರ್ತಿಯನ್ನು ಮೆರವಣಿಗೆಯ ಮೂಲಕ ಜಾಲಿಕೋಡಿ ಸಮುದ್ರ ತೀರಕ್ಕೆ ಕೊಂಡೊಯಲಾಯ್ತು. ಅಲ್ಲಿ ಮೂರ್ತಿಯ ಭಾಗಗಳನ್ನು ಬೇರ್ಪಡಿಸಿ ಸಮುದ್ರದಲ್ಲಿ ವಿಸರ್ಜಿಸಲಾಯಿತು. ಸಕಲ ವಿಧಿವಿಧಾನಗಳ ಮೂಲಕ ವಿಸರ್ಜಿಸುವುದರೊಂದಿಗೆ ಮಾರಿ ಜಾತ್ರೆ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಶಾಸಕ ಸುನೀಲ ನಾಯ್ಕ, ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಪರಮೇಶ್ವರ ನಾಯ್ಕ, ನರೇಂದ್ರ ನಾಯಕ, ಶ್ರೀಧರ ನಾಯ್ಕ, ಶ್ರೀಪಾದ ಕಂಚುಗಾರ, ನಾರಾಯಣ ಖಾರ್ವಿ, ಮಾದೇವ ಮೊಗೇರ, ರಘುವೀರ ಬಾಳಗಿ, ರಾಮನಾಥ ಬಳಗಾರ, ಗುರು ಸಾಣಿಕಟ್ಟೆ, ದಿನೇಶ ನಾಯ್ಕ, ಕೃಷ್ಣ ನಾಯ್ಕ, ನಾರಾಯಣ ಖಾರ್ವಿ, ಗೋವಿಂದ ನಾಯ್ಕ, ಮುಂತಾದವರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಎಎಸ್‍ಪಿ ನಿಖಿಲ್ ಬಿ ನೇತೃತ್ವದಲ್ಲಿ ಸಿಪಿಐ ದಿವಾಕರ, ಪಿ.ಎಸ್.ಐ ಭರತ, ಪಿಎಸ್ಐ ಕುಡಗುಂಟಿ ಹಾಗೂ ಇತರ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಈ ಬಾರಿ ಮಾರಿದೇವಿಯ ಮೂರ್ತಿಯನ್ನು ವಾಹನದ ಮೇಲೆ ಸಾಗಿಸಲಾಯಿತು.