ಕಾರವಾರ : ಬಡವರ ಹಸಿವು ನೀಗಿಸುವ ನಿಟ್ಟಿನಲ್ಲಿ ಕಾರವಾರ ಹಾಗೂ ಅಂಕೋಲಾದಲ್ಲಿ ನಿರ್ಮಾಣಗೊಂಡಿದ್ದ ಇಂದಿರಾ ಕ್ಯಾಂಟೀನ್ಗೆ ಕೊನೆಗೂ ಉದ್ಘಾಟನಾ ಭಾಗ್ಯ ದೊರೆತಿದ್ದು, ಇಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹಾಗೂ ಶಾಸಕಿ ರೂಪಾಲಿ ನಾಯ್ಕ ಲೋಕಾರ್ಪಣೆಗೊಳಿಸಿ ಸಾರ್ವಜನಿಕರಿಗೆ ಉಪಹಾರ ನೀಡಿದರು.
ವರ್ಷದ ಹಿಂದೆ ಸಿದ್ಧಗೊಂಡಿದ್ದರೂ ಉದ್ಘಾಟನೆಯಾಗದೆ ಕ್ಯಾಂಟೀನ್ ಧೂಳು ಹಿಡಿಯುತ್ತಿರುವ ಬಗ್ಗೆ ತಿಂಗಳ ಹಿಂದೆ 'ಈಟಿವಿ ಭಾರತ', 'ಕಾರವಾರದಲ್ಲಿ ಧೂಳು ಹಿಡಿಯುತ್ತಿರೋ ಇಂದಿರಾ ಕ್ಯಾಂಟೀನ್' ಎಂಬ ವಿಶೇಷ ವರದಿ ಪ್ರಕಟಿಸಿತ್ತು. ವರದಿಯ ಬೆನ್ನಲ್ಲೇ ಎಚ್ಚೆತ್ತ ಸರ್ಕಾರವು ಒಂದು ತಿಂಗಳಲ್ಲಿಯೇ ಇಂದಿರಾ ಕ್ಯಾಂಟೀನ್ನ ಸಿದ್ಧಗೊಳಿಸಿದ್ದು, ಇಂದು ಉದ್ಘಾಟನೆಯಾಗಿದೆ.
ಹೆಚ್ಚಿನ ಓದಿಗಾಗಿ : ಕಾರವಾರದಲ್ಲಿ ಧೂಳು ಹಿಡಿಯುತ್ತಿರೋ ಇಂದಿರಾ ಕ್ಯಾಂಟೀನ್
ನಗರದ ಕೆಇಬಿ ಬಳಿಯಿರುವ ಇಂದಿರಾ ಕ್ಯಾಂಟೀನ್ನಲ್ಲಿ ಬಡವರು ಹಾಗೂ ಕಾರ್ಮಿಕರಿಗೆ ಬೆಳಗ್ಗೆ 5 ರೂಪಾಯಿಗೆ ಉಪಹಾರ ಹಾಗೂ ಮಧ್ಯಾಹ್ನ ಮತ್ತು ರಾತ್ರಿಗೆ 10 ರೂಪಾಯಿ ಊಟ ನೀಡಲಾಗುತ್ತದೆ. ಪ್ರತಿನಿತ್ಯ ಬಗೆ ಬಗೆಯ ತಿಂಡಿ ಹಾಗೂ ಊಟದ ವ್ಯವಸ್ಥೆಯಿದೆ. ಆದರೆ, ಕಳೆದ ಒಂದು ವರ್ಷದಿಂದ ಉದ್ಘಾಟನೆಯನ್ನೇ ಎದುರು ನೋಡುತ್ತಿದ್ದವರಿಗೆ ಕೊನೆಗೂ ಕಡಿಮೆ ದರದಲ್ಲಿ ಆಹಾರ ಸೇವಿಸುವ ಭಾಗ್ಯ ಲಭಿಸಿದಂತಾಗಿದೆ.
ಈ ಕುರಿತು ಮಾತನಾಡಿದ ಸಚಿವ ಶಿವರಾಮ್ ಹೆಬ್ಬಾರ್, ಕಳೆದೊಂದು ವರ್ಷದಿಂದ ನಾನಾ ಕಾರಣದಿಂದ ಉದ್ಘಾಟನೆ ಸಾಧ್ಯವಾಗಿರಲಿಲ್ಲ. ಆದರೆ, ಇಂದು ಬಡವರ ಹಸಿವು ನೀಗಿಸುವ ನಿಟ್ಟಿನಲ್ಲಿ ಅಂಕೋಲಾ ಮತ್ತು ಕಾರವಾರದಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಲಾಗಿದೆ. ಪ್ರತಿನಿತ್ಯ ಕಾರವಾರದಲ್ಲಿ 500 ಪ್ಲೇಟ್ನಂತೆ ಮೂರು ಹೊತ್ತು ಹಾಗೂ ಅಂಕೋಲಾದಲ್ಲಿ 300 ಪ್ಲೇಟ್ ಊಟ ತಯಾರಿಸಲಾಗುತ್ತದೆ. ಇದರ ಉಪಯೋಗವನ್ನು ಬಡವರು ಹಾಗೂ ಕಾರ್ಮಿಕರು ಬಳಸಿಕೊಳ್ಳಬೇಕು ಎಂದು ಹೇಳಿದರು.