ಕಾರವಾರ: ಕೊರೊನಾ 2ನೇ ಅಲೆ ಗಡಿ ಜಿಲ್ಲೆ ಉತ್ತರಕನ್ನಡವನ್ನು ಇನ್ನಿಲ್ಲದಂತೆ ಕಾಡತೊಡಗಿದೆ. ಕಳೆದ 2 ವಾರದಿಂದ ಜಿಲ್ಲೆಯಾದ್ಯಂತ ಏರುಗತಿಯಲ್ಲಿ ಸಾಗಿರುವ ಕೊರೊನಾ ಪ್ರಕರಣಗಳು ಜನಸಾಮಾನ್ಯರು ಮಾತ್ರವಲ್ಲದೆ ಇದೀಗ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಲ್ಲಿಯೂ ಕಾಣಿಸಿಕೊಂಡಿದ್ದು, ಆತಂಕಕ್ಕೆ ಕಾರಣವಾಗಿದೆ.
ಯಲ್ಲಾಪುರದ ವೈ.ಟಿ.ಎಸ್.ಖಾಸಗಿ ಶಿಕ್ಷಣ ಸಂಸ್ಥೆಯ ಕನ್ನಡ ಪ್ರೌಢಶಾಲೆಯಲ್ಲಿ 21 ವಿದ್ಯಾರ್ಥಿಗಳಿಗೆ ಹಾಗೂ ಇಬ್ಬರು ಶಿಕ್ಷಕರಿಗೆ ಸೋಂಕು ದೃಢಪಟ್ಟಿದೆ. ಅಂಕೋಲದ ಅಗಸೂರು ಪಬ್ಲಿಕ್ ಸ್ಕೂಲ್ನ 7 ವಿಧ್ಯಾರ್ಥಿಗಳು, ಮೂವರು ಶಿಕ್ಷಕಿಯರು, ಬಾವಿಕೇರಿ ಸರ್ಕಾರಿ ಪ್ರೌಢ ಶಾಲೆಯ ಓರ್ವ ಶಿಕ್ಷಕಿ, ಕೃಷ್ಣಾಪುರದ ಓರ್ವ ಶಿಕ್ಷಕನಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಸದ್ಯ ಆರೋಗ್ಯ ಇಲಾಖೆ ಜಾಗೃತಿ ವಹಿಸಿದ್ದು, ಸೋಂಕಿತ ಪ್ರದೇಶದ ಶಾಲೆಗಳ ಮಕ್ಕಳ ಗಂಟಲು ದ್ರವ ಪರೀಕ್ಷೆ ನಡೆಸಿದೆ. ಜಿಲ್ಲೆಯಲ್ಲಿ ಒಟ್ಟು 400 ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು, ವರದಿ ಬರಬೇಕಿದೆ ಎಂದು ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ತಿಳಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ಕೊರೊನಾ ಕಾಣಿಸಿಕೊಂಡ ಕಾರಣ ಆಯಾ ಶಾಲೆಗಳ ವಿದ್ಯಾರ್ಥಿಗಳ ಕೊರೊನಾ ಪರೀಕ್ಷೆ ನಡೆಸಿ ಹೋಂ ಐಸೋಲೇಷನ್ಗೆ ಸೂಚಿಸಲಾಗಿದೆ. ಅಲ್ಲದೆ ಶಾಲೆಗಳನ್ನು 3 ದಿನಗಳ ಕಾಲ ಬಂದ್ ಮಾಡಲಾಗಿದೆ. ಶಿಕ್ಷಣ ಇಲಾಖೆಯಿಂದ ಶಾಲೆಗಳಲ್ಲಿ ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿದೆ. ಸೋಂಕು ತಡೆಯಲು ಶಿಕ್ಷಣ ಇಲಾಖೆ ಕಠಿಣ ಕ್ರಮ ವಹಿಸಿದ್ದು, ಯಾವುದೇ ರೋಗ ಲಕ್ಷಣ ವಿದ್ಯಾರ್ಥಿಗಳಲ್ಲಿ ಅಥವಾ ಶಿಕ್ಷಕರಲ್ಲಿ ಕಾಣಿಸಿದಲ್ಲಿ ಶಾಲೆಯಿಂದ ದೂರ ಇರಿಸುವ ಹಾಗೂ ಪರೀಕ್ಷೆ ನಡೆಸುವ ಕಾರ್ಯ ತಕ್ಷಣ ಮಾಡಲಾಗುತ್ತಿದೆ ಎನ್ನುತ್ತಾರೆ ಕಾರವಾರ ಡಿಡಿಪಿಐ ಹರೀಶ ಗಾಂವಕರ್.
ಕಳೆದ ಒಂದು ವರ್ಷದಿಂದ ಕೊರೊನಾ ಆತಂಕವಿದ್ದರೂ ಜಿಲ್ಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಕೊರೊನಾ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡಿರಲಿಲ್ಲ. ಆದರೆ ಇದೀಗ ಸೋಂಕಿನ ಪ್ರಮಾಣದಲ್ಲಿ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಪೋಷಕರು ಸೇರಿದಂತೆ ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ.