ಕಾರವಾರ: ಉತ್ತರಕನ್ನಡ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಹಾ ಮಳೆಯಿಂದ ನದಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಕರಾವಳಿಯಾದ್ಯಂತ ಪ್ರವಾಹ ಎದುರಾಗಿದೆ.
ಜಿಲ್ಲೆಯ ಕರಾವಳಿಯ ಕಾರವಾರ, ಅಂಕೋಲಾ, ಹೊನ್ನಾವರದಲ್ಲಿ ಹಲವು ಊರುಗಳು ಮುಳುಗಡೆಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ಉತ್ತರಕನ್ನಡ ಜಿಲ್ಲೆಯ ಬೊಮ್ಮನಹಳ್ಳಿ, ಕೊಡಸಳ್ಳಿ ಹಾಗೂ ಕದ್ರಾ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆ ಆಗುತ್ತಿದ್ದು, ಈ ಮೂರು ಜಲಾಶಯಗಳಿಂದ ನೀರು ಬಿಡಲಾಗುವುದು. ಈ ಭಾಗದ ನದಿಗಳು ಅಪಾಯಮಟ್ಟ ಮೀರಿ ಹರಿಯುವುದರಿಂದ ನದಿಪಾತ್ರದಲ್ಲಿ ವಾಸಿಸುವ ಜನರು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಕೆ. ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಸಮೀಪದ ಶಾಲೆ, ಅಂಗನವಾಡಿ ಇತರೆಡೆ ಪುನರ್ವಸತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸಾರ್ವಜನಿಕರು ಸ್ಥಳಾಂತರಗೊಂಡು ಜಿಲ್ಲಾಡಳಿತದೊಂದಿಗೆ ಸಹಕರಿಸುವಂತೆ ಕೋರಿದ್ದಾರೆ.
ಯಲ್ಲಾಪುರ, ಜೊಯಿಡಾ, ಕಾರವಾರದಲ್ಲಿ ಧಾರಾಕಾರ ಮಳೆಗೆ ಕಾಳಿ ನದಿ ತುಂಬಿ ಹರಿಯುತ್ತಿದೆ. ಮತ್ತೊಂದೆಡೆ ಕದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ನಿರಂತರವಾಗಿ ಹೊರಬಿಡಲಾಗುತ್ತಿದೆ. ಸುಮಾರು 50 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದ್ದು, ಕಾಳಿ ನದಿಯಂಚಿನ ಪ್ರದೇಶಗಳಾದ ಮಲ್ಲಾಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಲವು ಹಳ್ಳಿಗಳು, ಕೆರವಡಿ, ಉಳಗಾ, ಖಾರ್ಗೆಜೂಗದಲ್ಲಿ ಸುಮಾರು ನೂರಾರು ಮನೆಗಳು ಮುಳುಗಡೆಯಾಗಿವೆ. ಇಲ್ಲಿನ ಜನರನ್ನು ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಅಲ್ಲದೆ ಗದ್ದೆ, ತೋಟ ಸಂಪೂರ್ಣ ಮುಳುಗಡೆಯಾಗಿದ್ದು, ಕೆಲ ಹಳೆಯ ಮನೆಗಳು ಕುಸಿಯುತ್ತಿವೆ. ಇನ್ನು ನೀರು ಬಿಡುವ ಮುನ್ನ ಸರಿಯಾಗಿ ಮಾಹಿತಿ ನೀಡದಿರುವುದೇ ಇಷ್ಟೊಂದು ದೊಡ್ಡ ಮಟ್ಟದ ಅನಾಹುತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇನ್ನು, ಕದ್ರಾದಿಂದ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ನೀರು ಬಿಡಲಾಗಿದೆ. ಎಂದೂ ಕೂಡ ಈ ರಿತಿ ಪ್ರವಾಹ ಸೃಷ್ಟಿಯಾಗಿರಲಿಲ್ಲ. ಅಲ್ಲದೆ ಮಳೆ ಮುಂದುವರಿದಿದ್ದು, ಸದ್ಯಕ್ಕಂತೂ ನೀರು ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಮಳೆ ಹೀಗೆ ಮುಂದುವರಿದಲ್ಲಿ ಇನ್ನಷ್ಟು ಮನೆಗಳು ಮುಳುಗಡೆಯಾಗಲಿವೆ ಎಂದು ಜನ ಆತಂಕ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ ಅಂಕೋಲಾ ಗಂಗಾವಳಿ, ಕುಮಟಾ ಅಘನಾಶಿನಿ ತುಂಬಿ ಹರಿಯುತ್ತಿದ್ದು, ಇಲ್ಲಿ ಕೂಡ ಪ್ರವಾಹ ಭೀತಿ ಎದುರಾಗಿದೆ. ಇನ್ನು ಶಿರಸಿ-ಕುಮಟಾ ಹೆದ್ದಾರಿ, ಸಿದ್ದಾಪುರ-ಕುಮಟಾ ರಸ್ತೆ, ಯಲ್ಲಾಪುರ ಅಂಕೋಲಾ ಹೆದ್ದಾರಿ ಸಂಪೂರ್ಣ ಸ್ಥಗಿತಗೊಂಡಿದ್ದು, ಈ ಮಾರ್ಗದಲ್ಲಿ ನೂರಾರು ಪ್ರಯಾಣಿಕರು ಅತಂತ್ರರಾಗಿದ್ದಾರೆ. ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.