ಕಾರವಾರ: ದೇಶದ ನೌಕಾಪಡೆಯ ಅತಿ ದೊಡ್ಡ ವಿಮಾನ ವಾಹಕ ಯುದ್ಧ ನೌಕೆ ಐಎನ್ ಎಸ್ ವಿಕ್ರಮಾದಿತ್ಯ ಹಡಗಿನಲ್ಲಿ ಇಂದು ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿದೆ.
ಈ ಬಗ್ಗೆ ನೌಕಾನೆಲೆ ಪಿಆರ್ ಓ ಮಾಹಿತಿ ನೀಡಿದ್ದು, ಕಾರವಾರದ ಕಂದಂಬ ನೌಕಾನೆಲೆಯಲ್ಲಿದ್ದ ಐಎನ್ಎಸ್ ವಿಕ್ರಮಾದಿತ್ಯ ಹಡಗಿನ ಸಿಬ್ಬಂದಿ ವಸತಿ ಇರುವ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಹೊಗೆ ಏಳುತ್ತಿರುವುದನ್ನು ಹಡಗಿನಲ್ಲಿದ್ದ ಸಿಬ್ಬಂದಿ ಗಮನಿಸಿದ್ದರು. ತಕ್ಷಣ ಎಚ್ಚೆತ್ತುಕೊಂಡ ಸಿಬ್ಬಂದಿ ತ್ವರಿತವಾಗಿ ಬೆಂಕಿ ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಯಾವುದೇ ದೊಡ್ಡ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಘಟನೆ ಹೇಗೆ ನಡೆದಿದೆ ಎಂಬುದರ ಬಗ್ಗೆ ತಿಳಿಯಲು ತನಿಖೆಗೆ ಆದೇಶಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಕೂಡ 2019ರ ಏಪ್ರಿಲ್ 26ರಂದು ಐಎನ್ಎಸ್ ವಿಕ್ರಮಾದಿತ್ಯ ಹಡಗಿನಲ್ಲಿ ಇಂತಹದ್ದೇ ಘಟನೆ ನಡೆದು ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದರು.
ಓದಿ : 15 ದಿನಗಳೊಳಗೆ ಸಾವಿರ ಆಕ್ಸಿಜನ್ ಬೆಡ್ಗಳುಳ್ಳ ಕೋವಿಡ್ ಆಸ್ಪತ್ರೆ ಕಾರ್ಯಾರಂಭ: ಸಚಿವ ಶ್ರೀರಾಮುಲು