ಶಿರಸಿ (ಉತ್ತರ ಕನ್ನಡ): ಭಾರತೀಯ ಜನತಾ ಪಕ್ಷ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮನ್ನಣೆ ನೀಡಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಎಲ್ಲರ ಅಭಿಪ್ರಾಯ ಕೇಳಲು ಕರ್ನಾಟಕಕ್ಕೆ ಬರುತ್ತಿದ್ದು, ಕೇಂದ್ರದ ನಿರ್ಣಯಕ್ಕೆ ಎಲ್ಲರೂ ಬದ್ಧ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರುಣ್ ಸಿಂಗ್ ನಾಲ್ಕು ಗೋಡೆಗಳ ಮಧ್ಯೆ ಶಾಸಕರು, ಮಂತ್ರಿಗಳು, ಕೋರ್ ಕಮಿಟಿ ಸದಸ್ಯರ ಅಭಿಪ್ರಾಯ ಕೇಳುತ್ತಾರೆ. ಎಲ್ಲರಿಗೂ ಅವಕಾಶ ಸಿಗಲಿದೆ. ನಂತರ ಇದರ ತೀರ್ಮಾನವನ್ನು ಕೇಂದ್ರವರು ತೆಗೆದುಕೊಳ್ಳಲಿದ್ದಾರೆ. ಈ ರೀತಿಯ ಪ್ರಜಾಪ್ರಭುತ್ವ ವ್ಯವಸ್ಥೆ ಕಾಂಗ್ರೆಸ್ನಲ್ಲಿ ಇಲ್ಲ. ಅಲ್ಲಿ ಜಮೀರ್ ಬಿ ಫಾರಂ ಕೊಡ್ತಾರೆ. ಜೊತೆಗೆ ಅವರೇ ಮುಖ್ಯಮಂತ್ರಿ ಘೋಷಣೆಯನ್ನೂ ಮಾಡ್ತಾರೆ. ಅಲ್ಲಿ ಅಶಿಸ್ತು ನಡೆಯುತ್ತದೆ. ಆದರೆ ಬಿಜೆಪಿಯಲ್ಲಿ ಅಶಿಸ್ತಿಗೆ ಆಸ್ಪದವಿಲ್ಲ ಎಂದರು.
ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಈಶ್ವರಪ್ಪ, ನಾನೊಬ್ಬ ಬಿಜೆಪಿ ಕಾರ್ಯಕರ್ತ. ಹೀಗಾಗಿ, ಕೇಂದ್ರದವರು ತೆಗೆದುಕೊಳ್ಳುವ ಎಲ್ಲಾ ತಿರ್ಮಾನಕ್ಕೆ ನಾನು ಬದ್ಧ. ಯಾರನ್ನೋ ತೆಗೆದು ಹಾಕಲು ಅಥವಾ ಸೇರಿಸಿಕೊಳ್ಳಲು ನಾನಿಲ್ಲ. ಈ ಹಿಂದೆ ಬಹುಮತ ಸಿಗದ ಕಾರಣಕ್ಕೆ ಗೊಂದಲ ಉಂಟಾಗಿತ್ತು. ಆದರೆ ನಮ್ಮ ಪಕ್ಷದ ನಾಯಕರಿಂದ ಗೊಂದಲ ನಿರ್ಮಾಣವಾಗಿಲ್ಲ ಎಂದರು.
ದಿಗ್ವಿಜಯ್ ಸಿಂಗ್ ಹೇಳಿಕೆಗೆ ಖಂಡನೆ:
ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಕಾಶ್ಮೀರಕ್ಕೆ ಸಂಬಂಧಿಸಿದಂತೆ ನೀಡಿರುವ ಹೇಳಿಕೆ ರಾಷ್ಟ್ರದ್ರೋಹಿ ಹೇಳಿಕೆಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಹೇಳೋರು, ಕೇಳೋರು ಇಲ್ಲ. ಇದರಿಂದ ಈ ರೀತಿಯ ಹೇಳಿಕೆಗಳು ಬರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸ್ವಗ್ರಾಮದಲ್ಲಿ ಸಂಚಾರಿ ವಿಜಯ್ ಅಂತ್ಯಸಂಸ್ಕಾರಕ್ಕೆ ಸಕಲ ಸಿದ್ಧತೆ