ಕಾರವಾರ: ಕುಮಟಾ ತಾಲೂಕಿನ ದೇವಗಿರಿಯ ಗುಡಬಳ್ಳಿಯಲ್ಲಿ ನೆಲೆಸಿರುವ ಪುರಾಣ ಪ್ರಸಿದ್ಧ ಶ್ರೀ ಮಹಾಗಣಪತಿ ಮಹಾಮಾಯಿ ಮಹಿಷಾಸುರ ಮರ್ದಿನಿ ದೇವಾಲಯದಲ್ಲಿ ವಿಜಯದಶಮಿಯ ನಿಮಿತ್ತ ಭಕ್ತರು ಕುದಿಯುತ್ತಿರುವ ಎಣ್ಣೆಯಿಂದ ಬರಿಗೈಯಿಂದಲೇ ವಡೆ ತೆಗೆದಿದ್ದಾರೆ.
ಗುಡಬಳ್ಳಿಯ ಮಹಿಷಾಸುರ ಮರ್ದಿನಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯಿತು. ಭಕ್ತರು ನೀಡಿದ ಹೂವಿನಿಂದ ಶ್ರೀದೇವಿ ಅಲಂಕೃತಗೊಳಿಸಿ, ವಿವಿಧ ಪೂಜಾ ಕೈಕಂರ್ಯ ನೆರವೇರಿಸಲಾಯಿತು. ಬೆಳಗ್ಗೆಯಿಂದ ಸಂಜೆವರೆಗೂ ಭಕ್ತರು ಆಗಮಿಸಿ, ಶ್ರೀದೇವಿಯ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು. ಅಲ್ಲದೇ ಪ್ರತಿ ವರ್ಷದಂತೆ ಈ ವರ್ಷವೂ ವಿಜಯದಶಮಿಯಂದು ಕುದಿಯುತ್ತಿರುವ ಎಣ್ಣೆಯಲ್ಲಿರುವ ವಡೆಯನ್ನ ಬರಿಗೈಯಿಂದಲೇ ತೆಗೆಯುವ ಕಾರ್ಯಕ್ರಮ ಜರುಗಿತು.
ಮೊದಲು ಅಶೋಕ ರಾಯ್ಕರ ಎಂಬುವವರು ದೇವಿಯ ನಾಮಸ್ಮರಣೆ ಮಾಡುತ್ತ ಕುದಿಯುತ್ತಿರುವ ಎಣ್ಣೆಯಲ್ಲಿ ಕೈಹಾಕಿ ವಡೆ ತೆಗೆದರು. ಬಳಿಕ ಆಡಳಿತ ಮಂಡಳಿಯ ಅಧ್ಯಕ್ಷ ರಾಮದಾಸ ರಾಯ್ಕರ್ ಮಾತನಾಡಿ, ಈ ದೇವರ ಮೂಲ ಗೋವಾ. ಅಲ್ಲಿಂದ ಈ ದೇವರನ್ನು ಗುಡಬಳ್ಳಿಗೆ ತಂದು ಪ್ರತಿಷ್ಠಾಪಿಸಲಾಯಿತು. ವಿವಿಧ ಹಬ್ಬಗಳಲ್ಲೂ ವಿಶೇಷ ಪೂಜೆ ಮತ್ತು ಆಚರಣೆ ನಡೆಸಲಾಗುತ್ತದೆ. ವಿಜಯದಶಮಿ ನಿಮಿತ್ತ ವಡೆ ತೆಗೆಯುವ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತದೆ. ಸಮಸ್ತ ಭಕ್ತರು ದೇವಿ ಸನ್ನಿಧಿಗೆ ಆಗಮಿಸಿ ಯತಾಶಕ್ತಿ ಸೇವೆ ಸಲ್ಲಿಸಿ ಕೃತಾರ್ಥರಾಗಬೇಕು ಎಂದು ವಿನಂತಿಸಿದರು.