ಶಿರಸಿ : ಯಲ್ಲಾಪುರದ ಮಂಚಿಕೇರಿ ಬಳಿ ಬೇಡ್ತಿ ನದಿಗೆ ಅಡ್ಡಲಾಗಿ ಕಟ್ಟಿರುವ ಪುರಾತನ ಸೇತುವೆ ಶಿಥಿಲಗೊಂಡಿದ್ದು, ಹೊಸ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದ ಪ್ರಯಾಣಿಕರು ಪರದಾಟುವಂತಹ ಸ್ಥಿತಿ ನಿರ್ಮಾಣವಾಗಿದೆ.
ಖಾನಾಪುರ -ತಾಳಗುಪ್ಪ ರಾಜ್ಯ ಹೆದ್ದಾರಿ 93 ರಲ್ಲಿರುವ ಯಲ್ಲಾಪುರ ತಾಲೂಕಿಗೆ ಒಳಪಡುವಪುರಾತನಬೇಡ್ತಿ ಸೇತುವೆಗೆ ಪರ್ಯಾಯವಾಗಿ ನೂತನ ಸೇತುವೆ ಕಾಮಗಾರಿ ಸೆ.2016 ರಲ್ಲಿ ಆರಂಭಗೊಂಡಿತ್ತು. ಈ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯ ಕೇಂದ್ರ ರಸ್ತೆ ನಿಧಿ ಯೋಜನೆಯಡಿ ಬರೋಬ್ಬರಿ 14 ಕೋಟಿ ರೂ. ಜಾರಿಯಾಗಿದೆ. ಜನವರಿ 2016 ರಲ್ಲಿ ಉಸ್ತುವಾರಿ ಸಚಿವರು ಗುದ್ದಲಿ ಪೂಜೆ ನೆರವೇರಿಸಿದ್ದರಾದರೂ ಕೆಲವು ತಾಂತ್ರಿಕ ಕಾರಣಗಳಿಂದ ಚಾಲನೆ ದೊರೆತಿರಲಿಲ್ಲ. ಇದರಿಂದ ಆತಂಕಕ್ಕೀಡಾಗಿದ್ದ ಸಾರ್ವಜನಿಕರು, ವಾಹನ ಸವಾರರು ಸೇತುವೆ ಪುನರ್ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದ ಪರಿಣಾಮ ಸೇತುವೆ ಕಾಮಗಾರಿ ಪ್ರಾರಂಭಗೊಂಡಿತ್ತು.
ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೇತುವೆ ನಿರ್ಮಾಣ ಕಾಮಗಾರಿ ಆರಂಭದಿಂದಲೇ ತೆವಳುತ್ತಾ ಸಾಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಸೇತುವೆ 170 ಮೀ. ಉದ್ದ, 12 ಮೀ. ಅಗಲವಿದೆ. 14 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾಮಗಾರಿ ಗುತ್ತಿಗೆಯನ್ನು ಹುಬ್ಬಳ್ಳಿಯ ಬಿ.ಎಸ್.ಕಂಪನಿಯವರು ವಹಿಸಿಕೊಂಡಿದ್ದರು. ಮುಗಿಸಲು 18 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಈವರೆಗೂ ಅರ್ಧದಷ್ಟು ಕಾಮಗಾರಿ ಮಾತ್ರ ಮುಗಿದಿದೆ.
ಮಳೆಗಾಲ ಆರಂಭಕ್ಕೂ ಮುನ್ನ ಆಧುನಿಕ ತಂತ್ರಜ್ಞಾನದಿಂದ ದ್ವಿಪಥ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ವಾಹನ ಸವಾರರು, ಸ್ಥಳೀಯ ಜನರು, ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.