ಕಾರವಾರ(ಉತ್ತರ ಕನ್ನಡ) : ಜಿಲ್ಲೆಗೆ ಒಂದು ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಬೇಕು ಎಂಬ ಕೂಗು ಜೋರಾಗಿದೆ. ಜಿಲ್ಲೆಯಾದ್ಯಂತ ವಿವಿಧ ರೀತಿಯಲ್ಲಿ ಹೋರಾಟ ಮಾಡುವ ಮೂಲಕ ಜನರು ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡುತ್ತಿದ್ದಾರೆ. ದುರಂತವೆಂದರೆ ಅಪಘಾತಗಳಾದಾಗ, ಅವಘಡಗಳು ಸಂಭವಿಸಿದಾಗ ಗಾಯಾಳುಗಳು, ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಜಿಲ್ಲೆಯಲ್ಲಿ ಆಂಬ್ಯುಲೆನ್ಸ್‌ಗಳೇ ಸಮರ್ಪಕವಾಗಿಲ್ಲ. ಜನರಿಗೆ ಸೇವೆ ನೀಡಬೇಕಾದ ಸರ್ಕಾರಿ ಆಂಬ್ಯುಲೆನ್ಸ್‌ಗಳೇ ಗ್ಯಾರೇಜ್‌ಗಳಲ್ಲಿ ತಕ್ಕು ಹಿಡಿದು ನಿಂತಿದೆ.
ಬಡಜನರು, ಕಾರ್ಮಿಕರ ಸೇವೆಗಾಗಿ ಬಳಕೆಯಾಗಬೇಕಿದ್ದ ಆಂಬ್ಯುಲೆನ್ಸ್‌ಗಳು ಇದೀಗ ರಿಪೇರಿ ಕಾಣದೇ ತುಕ್ಕು ಹಿಡಿಯುತ್ತಾ ಗ್ಯಾರೇಜ್‌ಗಳಲ್ಲಿ ನಿಂತಿವೆ. ಅದೂ ಸಹ ಕೊರೊನಾ ಅವಧಿಯಲ್ಲಿ ಸಚಿವರು, ಶಾಸಕರುಗಳ ಅನುದಾನದಲ್ಲಿ ನೀಡಿದ್ದ ಹೊಸ ಆಂಬ್ಯುಲೆನ್ಸ್‌ಗಳೂ ಸಹ ಗ್ಯಾರೇಜ್ ಸೇರಿವೆ. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಡಿಯಲ್ಲಿ 45 ಅಂಬ್ಯುಲೆನ್ಸ್‌ಗಳಿದ್ದು, ಜಿವಿಕೆ ನಿರ್ವಹಿಸುತ್ತಿರುವ 108 ಆಂಬ್ಯುಲೆನ್ಸ್‌ಗಳು 20 ಇವೆ. ಇದರೊಂದಿಗೆ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಆಯಾ ವ್ಯಾಪ್ತಿಯ ಸಚಿವರು, ಶಾಸಕರು ತಮ್ಮ ಅನುದಾನದಲ್ಲಿ ನೀಡಿದ 17 ಆಂಬ್ಯುಲೆನ್ಸ್‌ಗಳಿವೆ.
ಆದರೆ ಸದ್ಯ ಜಿಲ್ಲೆಯಲ್ಲಿ ನೋಡಿದರೆ ಒಂದೆರಡು ಸರ್ಕಾರಿ ಆಂಬ್ಯುಲೆನ್ಸ್‌ಗಳು ಲಭ್ಯ ಇದೆ. ಬಹುತೇಕ ಸರ್ಕಾರಿ ಆಂಬ್ಯುಲೆನ್ಸ್‌ಗಳು ಸೂಕ್ತ ನಿರ್ವಹಣೆಯಿಲ್ಲದೇ ಗ್ಯಾರೇಜ್ ಸೇರಿವೆ. ಇದರಿಂದಾಗಿ ಜಿಲ್ಲೆಯ ಜನಸಾಮಾನ್ಯರು ತುರ್ತು ಅವಶ್ಯಕತೆ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಲು ಖಾಸಗಿ ಆಂಬ್ಯುಲೆನ್ಸ್ಗಳನ್ನೇ ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ಬಡ ಜನರಿಗೆ ಹೊರೆಯಾಗುತ್ತಿದೆ.
ದೂರದ ಆಸ್ಪತ್ರೆಗಳಿಗೆ ಸಾಗಿಸುವ ಸಮಸ್ಯೆ: ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದಿರುವುದರಿಂದ ತುರ್ತು ಚಿಕಿತ್ಸೆಗೆ ಮಂಗಳೂರು, ಉಡುಪಿ, ಹುಬ್ಬಳ್ಳಿ, ಗೋವಾಕ್ಕೆ ತೆರಳಬೇಕಾದ ಪರಿಸ್ಥಿತಿ ಉಂಟಾಗಿದೆ. ಜಿಲ್ಲೆಯಿಂದ ಸುಸಜ್ಜಿತ ಆಸ್ಪತ್ರೆಗಳು 150ರಿಂದ 200 ಕಿಲೋಮೀಟರ್ ಅಂತರದಲ್ಲಿದ್ದು ತುರ್ತು ರೋಗಿಗಳನ್ನು ಸಾಗಿಸಲು ವೆಂಟಿಲೇಟರ್, ಡೀಫಿಬ್ರಿಲೇಟರ್, ಮಾನಿಟರ್ ಸೇರಿದಂತೆ ಸುಸಜ್ಜಿತ ವ್ಯವಸ್ಥೆಗಳಿರುವ ಆಂಬ್ಯುಲೆನ್ಸ್ ಅಗತ್ಯವಿರುತ್ತದೆ.
ಆದರೆ ಜಿಲ್ಲೆಯಲ್ಲಿ ಸದ್ಯ ಇರುವ ಸರ್ಕಾರಿ ಆಂಬ್ಯುಲೆನ್ಸ್‌ಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಆಂಬ್ಯುಲೆನ್ಸ್‌ಗಳು ಕೆಲವೇ ಇವೆ. ಹೀಗಾಗಿ ತುರ್ತು ಅಗತ್ಯ ಸಂದರ್ಭಗಳಲ್ಲಿ ಖಾಸಗಿ ಆಂಬ್ಯುಲೆನ್ಸ್‌ಗಳಿಗೆ 8 ರಿಂದ 10 ಸಾವಿರ ರೂಪಾಯಿ ನೀಡಿ ಆಸ್ಪತ್ರೆಗೆ ತೆರಳಬೇಕಿದೆ. ಆಸ್ಪತ್ರೆಗೆ ತೆರಳುವುದಕ್ಕೇ ಇಷ್ಟು ಹಣ ಖರ್ಚು ಮಾಡಿದರೆ ಆಸ್ಪತ್ರೆಯ ಬಿಲ್ ಕಟ್ಟಲು ಬಡಜನರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಮೊದಲು ಜಿಲ್ಲೆಯ ಅಂಬ್ಯುಲೆನ್ಸ್ ಸೇವೆಯನ್ನು ಸರಿಪಡಿಸಲಿ ಅನ್ನೋದು ಸ್ಥಳೀಯರ ಅಭಿಪ್ರಾಯ.
ಶೀಘ್ರ ಕ್ರಮದ ಭರವಸೆ: ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯಿಸಿ, "ಆಂಬ್ಯುಲೆನ್ಸ್ ಅಲಭ್ಯತೆ ಗಮನಕ್ಕೆ ಬಂದಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಟೋಲ್ ಫ್ರೀ ನಂಬರ್ ಪ್ರಾರಂಭಿಸುತ್ತಿದ್ದೇವೆ. ಈ ಮೂಲಕ ಜನರಿಗೆ ಅಗತ್ಯವಿರುವಲ್ಲಿ ಸರ್ಕಾರಿ ಅಂಬ್ಯುಲೆನ್ಸ್ ಸೇವೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ" ಎಂದರು.
ಇದನ್ನೂ ಓದಿ : ರೈತನ ಭೂಮಿಯಲ್ಲಿ ಅತಿ ದೊಡ್ಡ ರಾಷ್ಟ್ರಧ್ವಜ: 75 ಅಡಿ ಉದ್ದ, 50 ಅಡಿ ಅಗಲ, 140 ಕೆಜಿ ತೂಕದ ಧ್ವಜ ನಿರ್ಮಿಸಿದ ಕುಟುಂಬ