ಉಡುಪಿ: ಆನ್ಲೈನ್ನಲ್ಲಿ ಮೋಸ ಮಾಡುವವರು ಹೆಚ್ಚಾಗುತ್ತಿದ್ದಂತೆ, ಮೋಸ ಹೋಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಂತಹುದೇ ಆನ್‌ಲೈನ್ ವಂಚನೆಯಿಂದ ಉಡುಪಿಯ ಉದ್ಯಮಿಯೊಬ್ಬರು ಮೂರು ಲಕ್ಷ ಹಣ ಕಳೆದುಕೊಂಡಿದ್ದಾರೆ.
ಆನ್‌ಲೈನ್ ವಂಚನೆ ಪ್ರಕರಣ: ಉಡುಪಿಯ ಮಂದಾರ್ತಿ ಮೂಲದ ಉದ್ಯಮಿ ಹಾಗೂ ಯುರೋ ಬಾಂಡ್ ಡೀಲರ್ಗೆ ಸೆ.4ರಂದು ಅನಾಮಧೇಯ ವ್ಯಕ್ತಿಯೊಬ್ಬ ಯುರೋ ಬಾಂಡ್ ಕಂಪನಿಯ ಮಾಲಿಕನೆಂದು ಕರೆ ಮಾಡಿ, ತನ್ನ ಮಗ ಅಪಘಾತಕ್ಕೀಡಾಗಿ ಗಾಯಗೊಂಡಿದ್ದಾನೆ, ಮಗನನ್ನು ಮಂಗಳೂರಿನ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲು ತುರ್ತಾಗಿ 3 ಲಕ್ಷ ರೂ. ಹಣವನ್ನು ಖಾತೆಗೆ ಕಳುಹಿಸಿ ಕೊಡುವಂತೆ ಕೇಳಿಕೊಂಡಿದ್ದ. ಇದಕ್ಕೆ ಸ್ಪಂದಿಸಿದ ಉದ್ಯಮಿ ತನ್ನ ಹಾಗೂ ಸ್ನೇಹಿತರ ಖಾತೆಯಿಂದ ಒಟ್ಟು 3 ಲಕ್ಷ ರೂ. ಹಣವನ್ನು ಆನ್‌ಲೈನ್ ಮೂಲಕ ಹಾಕಿದ್ದರು.
ನಂತರ ಅನುಮಾನಗೊಂಡು ಯುರೋ ಬಾಂಡ್ ಕಂಪನಿಗೆ ಸಂಪರ್ಕಿಸಿ ಮಾಹಿತಿ ಪಡೆದಾಗ ಉದ್ಯಮಿ ಮೋಸ ಹೋಗಿರುವುದು ತಿಳಿದುಬಂತು. ಕೂಡಲೇ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ವಂಚಕನ ನಂಬರ್ ಟ್ರೇಸ್ ಮಾಡಿದರು. ಆಗ ಆರೋಪಿಗಳು ಗುಜರಾತ್ ರಾಜ್ಯದ ಸೂರತ್ ಪ್ರದೇಶದಲ್ಲಿರುವುದು ಕಂಡುಬಂತು.
ಆದ್ರೆ ಖದೀಮ ಹಣ ಬಂದ ತಕ್ಷಣ ತನ್ನ ಖಾತೆಯಿಂದ ಮಹಾರಾಷ್ಟ್ರದ ಥಾಣೆ ಮೂಲದ ವ್ಯಕ್ತಿಯೊಬ್ಬನ ಖಾತೆಗೆ ವರ್ಗಾವಣೆ ಮಾಡಿದ್ದ. ಕೂಡಲೇ ಉಡುಪಿ ಪೊಲೀಸ್ ತಂಡ, ಮಹಾರಾಷ್ಟ್ರಕ್ಕೆ ತೆರಳಿ ಆನ್‌ಲೈನ್ ವಂಚನೆ ಮಾಡಿದ ವಂಚಕ ಹಾಗೂ ಆತನ ಜೊತೆಗೆ ಇದ್ದ ಇಬ್ಬರನ್ನು ವಶಕ್ಕೆ ಪಡೆದು ಉಡುಪಿಗೆ ಕರೆ ತಂದಿದ್ದಾರೆ. ಪ್ರಕರಣ ಬಗ್ಗೆ ಉಡುಪಿ ಅಕ್ಷಯ್ ಹಾಕೆ ಮಾಹಿತಿ ನೀಡಿದ್ದಾರೆ.
(ಇದನ್ನೂ ಓದಿ: ಲಾರಿ ಡಿಕ್ಕಿ.. ತಂದೆ ಮಗ ಸಾವು, ಲಾರಿ ಚಾಲಕ ವಶಕ್ಕೆ)