ಉಡುಪಿ: ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರ ಯೋಜನೆಯಿಂದ ಪರಿಸರ ಹಾನಿ ಆಗಿದೆ ಎಂದು ನಂದಿಕೂರು ಜನಜಾಗೃತಿ ಸಮಿತಿಯು ರಾಷ್ಟ್ರೀಯ ಹಸಿರು ಪೀಠದ ಮುಂದೆ 2018ರಲ್ಲಿ ದಾಖಲಿಸಿರುವ ದಾವೆಯನ್ವಯ, ಯೋಜನೆಯಿಂದಾಗಿ ಉಂಟಾಗಿರುವ ಪರಿಸರ ಹಾನಿಗಳ ಕುರಿತು ಪರಿಶೀಲಿಸಿ ದಾಖಲಿಸಿಕೊಳ್ಳಲು ನೇಮಿಸಲಾಗಿರುವ ಕೇಂದ್ರೀಯ ಪರಿಸರ ತಜ್ಞರ ತಂಡ ಮಂಗಳವಾರದಂದು ಎಲ್ಲೂರು ಗ್ರಾಮದ ಉಳ್ಳೂರು, ಕೊಳಚೂರು, ಮುದರಂಗಡಿ ಭಾಗಗಳಿಗೆ ತೆರಳಿ ಪರಿಶೀಲನೆ ನಡೆಸಿತು.
ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿ ಬೆಂಗಳೂರು ಕಚೇರಿಯ ಜಂಟಿ ನಿರ್ದೇಶಕ ತಿರುಮೂರ್ತಿ, ಬೆಂಗಳೂರಿನ ಫ್ರೊ. ಡಾ. ಶ್ರೀಕಾಂತ್ ಹಾಗೂ ಐಎಸ್‌ಇಸಿ ಬೆಂಗಳೂರಿನ ಡಾ. ಕೃಷ್ಣರಾಜ್ ಅವರು ಈ ಪರಿಸರ ತಂಡದಲ್ಲಿರುವವರು. ಸಮಿತಿಯ ಪರಿಶೀಲನಾ ಅಂಶಗಳ ಕುರಿತಾಗಿ ವಿವರಿಸಿದ ಡಾ. ಕೃಷ್ಣರಾಜ್, ಪರಿಸರ ಹಾನಿಗೊಳಗಾದವರಿಗೆ ಪರಿಹಾರ ನಿಗದಿಪಡಿಸಲು ಈ ತಂಡವು ರೈತರ ಭೂಮಿಗಳಿಗೆ ತೆರಳುತ್ತಿದೆ. ಪರಿಸರಕ್ಕೆ ಸಂಬಂಧಿಸಿದಂತೆ ಅನೇಕ ತೊಂದರೆಗಳನ್ನು ತಂಡವು ಈಗಾಗಲೇ ಕಲೆ ಹಾಕಿದೆ. ಪರಿಸರ, ಆರೋಗ್ಯ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳಿಂದ ವರದಿಯನ್ನು ತರಿಸಿಕೊಳ್ಳುತ್ತಿದ್ದೇವೆ. ಕೇಂದ್ರೀಯ ಹಸಿರು ಪೀಠಕ್ಕೆ ತಜ್ಞರ ಸಮಿತಿಯು ಮುಂದಿನ ಜ. 31ರೊಳಗಾಗಿ ವರದಿಯನ್ನು ನೀಡಬೇಕಾಗಿದೆ. ಆದರೆ ಮತ್ತಷ್ಟು ಅಂಕಿ ಅಂಶಗಳ ಕ್ರೋಢೀಕರಣವು ಆಗಬೇಕಿರುವುದರಿಂದ ಈ ದಿನಾಂಕವು ಮುಂದೂಡಲ್ಪಡಬಹುದು ಎಂದು ಡಾ. ಕೃಷ್ಣರಾಜ್ ಹೇಳಿದರು.
ಉಳ್ಳೂರಿನ ಜಗನ್ನಾಥ ಮೂಲ್ಯ ಅವರು ತನ್ನ ಅನಾರೋಗ್ಯ, ವೃದ್ಧ ತಾಯಿಯನ್ನು ರಸ್ತೆ ಸೌಕರ್ಯವಿಲ್ಲದಿರುವುದರಿಂದ ಆಸ್ಪತ್ರೆಗೆ ಒಯ್ಯಲು ಪಡುತ್ತಿರುವ ಬವಣೆ, ಕೃಷಿನಾಶ, ಬೆಳೆನಾಶ ಮುಂತಾದ ತೊಂದರೆಗಳನ್ನು ಸಮಿತಿಯ ಮುಂದೆ ವಿವರಿಸಿದರು. ಎಲ್ಲೂರು ಗ್ರಾಮದ ಜಯಂತ್ ರಾವ್, ಗಣೇಶ್ ರಾವ್ ಮನೆ ಪರಿಸರ, ಕೃಷಿ ಭೂಮಿ, ತೋಟ, ಕುಡಿಯುವ ನೀರು ಹಾಗೂ ಜಾನುವಾರುಗಳ ಆರೋಗ್ಯದ ಮೇಲುಂಟಾಗಿರುವ ಹಾನಿಗಳನ್ನು ವಿವರಿಸಿದ್ರು.
ಈ ಸುದ್ದಿಯನ್ನೂ ಓದಿ: ಬಳ್ಳಾರಿ: ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಬರ್ಬರ ಕೊಲೆ
ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೂ ತೆರಳಿದ ತಂಡ 2007ರ ಬಳಿಕ ಜನತೆಯ ಆರೋಗ್ಯ ಮೇಲಾಗಿರುವ ಹಾನಿಯ ಮಟ್ಟವನ್ನು ಅಂಕಿಅಂಶಗಳ ಸಹಿತವಾಗಿ ದಾಖಲಿಸಿಕೊಂಡಿದೆ. ಎಲ್ಲೂರು ಭಂಡಾರಮನೆ ಮಾಧವ ಶೆಟ್ಟಿ ಮತ್ತು ಹರೀಶ್ ಶೆಟ್ಟಿ ಯೋಜನೆಯಿಂದಾಗಿ ಸುಮಾರು 10ಕಿ.ಮೀ. ಸುತ್ತಮುತ್ತಲ ಪರಿಸರಕ್ಕೆ ಆಗಿರುವ ಹಾನಿಗಳ ಬಗ್ಗೆ, ಸಮಿತಿಯ ಮುಂದೆ ವಿವರಿಸಿದರು. ಈ ಹಿಂದೆ ಪರಿಸರ ಕಾನೂನು ಉಲ್ಲಂಘನೆಗಾಗಿ ಸುಮಾರು 5 ಕೋಟಿ ರೂ. ಗಳನ್ನು ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿಗೆ ಯುಪಿಸಿಎಲ್ ದಂಡ ಪಾವತಿಸಿದೆ. ಸದ್ಯ ಜನತೆಗೆ ಯೋಜನೆಯಿಂದಾಗಿ ಆಗಿರಬಹುದಾದ ಸುಮಾರು 177.8 ಕೋಟಿ ರೂ. ನಷ್ಟ ಪಾವತಿಗಾಗಿ ನಂದಿಕೂರು ಜನಜಾಗೃತಿ ಸಮಿತಿಯ ದಾವೆಯಲ್ಲಿ ಅಂತಿಮ ಆದೇಶವೂ ನ. ಜ. ಜಾ, ಸಮಿತಿಯ ಪರವಾಗಿಯೇ ಬಂದಿದೆ. ಅದಕ್ಕಾಗಿ ಈ ಸಮಿತಿಯು ಪರಿಶೀಲಿಸಿ ವರದಿಯನ್ನು ನೀಡಲಿದೆ ಎಂದೂ ತಜ್ಞರ ಸಮಿತಿ ಸದಸ್ಯ ಡಾ. ಕೃಷ್ಣರಾಜ್ ತಿಳಿಸಿದರು.