ಉಡುಪಿ: ಜಿಲ್ಲೆಯಲ್ಲಿ ಗಾಂಜಾ ಬೇಟೆ ಮುಂದುವರಿದಿದ್ದು, ನಿನ್ನೆ ರಾತ್ರಿ ಬೈಂದೂರು ತಾಲೂಕಿನ ಮರವಂತೆಯಲ್ಲಿ 20 ಕೆ.ಜಿ 630 ಗ್ರಾಂ ಗಾಂಜಾ ವಶಪಡಿಸಿಕೊಂಡಿರುವ ಜಿಲ್ಲಾ ಪೊಲೀಸರು, ನಾಲ್ವರನ್ನು ಬಂಧಿಸಿದ್ದಾರೆ.
ದ.ಕ ಜಿಲ್ಲೆಯ ಹರೇಕಳ ನಿವಾಸಿಗಳಾದ ಮಹಮ್ಮದ್ ಸಾಕೀರ್(24), ಮಹಮ್ಮದ್ ಜಾಫರ್(32), ಬೈಂದೂರು ಕಿರಿಮಂಜೇಶ್ವರ ಗ್ರಾಮ ನಿವಾಸಿ ಅಲ್ಫಾಜ್(20) ಮತ್ತು ಉ.ಕ. ಜಿಲ್ಲೆ ಹೊನ್ನಾವರ ನಿವಾಸಿ ಮಹಮ್ಮದ್ ಇಸೂಫ್ ಸಾಬ್(45) ಬಂಧಿತ ಆರೋಪಿಗಳಾಗಿದ್ದಾರೆ.
ಖಚಿತ ಮಾಹಿತಿಯ ಆಧಾರದ ಮೇರೆಗೆ ಗಂಗೊಳ್ಳಿ ಪಿಎಸ್‌ಐ ಭೀಮಾಶಂಕರ ಸಿನ್ನೂರ ಸಂಗಣ್ಣ ಅವರು, ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ಕೆಎ 20 ಡಿ 5488 ನೋಂದಣಿ ಸಂಖ್ಯೆಯ ವಾಹನವನ್ನು ರಾ.ಹೆ. 66ರಲ್ಲಿ ಮರವಂತೆ ಮಸೀದಿ ಬಳಿ ತಡೆದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಅದರಲ್ಲಿ ಗಾಂಜಾ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ವಾಹನದಲ್ಲಿ 20.630 ಗ್ರಾಂ ಗಾಂಜಾ ದೊರೆತಿದೆ.
ನಾಲ್ವರು ಆರೋಪಿಗಳು ಗಾಂಜಾ ಸೇವನೆ ಹಾಗೂ ಮಾರಾಟ ಮಾಡುವ ಉದ್ದೇಶದಿಂದ ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದರು. ಆರೋಪಿಗಳನ್ನು ವಿಚಾರಣೆ ನಡೆಸಿದಾಗ, ಅವರು ಭಟ್ಕಳದಿಂದ ಗಾಂಜಾ ಮಾರಾಟ ಮಾಡುತ್ತಿದ್ದ ವಿಚಾರ ಗೊತ್ತಾಗಿದೆ. ಆರೋಪಿಗಳಿಂದ ಗಾಂಜಾ, ಐದು ಮೊಬೈಲ್‌ಗಳು, ಇನ್ಸುಲೇಟರ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಸ್ವಾಧೀನಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 14.45 ಲಕ್ಷ ರೂ. ಆಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣೆಯಲ್ಲಿ ಎನ್.ಡಿ.ಪಿ.ಎಸ್. ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.