ತುಮಕೂರು: ಪ್ರತಿವರ್ಷ ರೈತರಿಗೆ ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿ ಹಣ ನೀಡುತ್ತಿದ್ದ ತುಮಕೂರು ಹಾಲು ಉತ್ಪಾದಕರ ಸಂಘವು (ತುಮುಲ್) ಈ ಬಾರಿ ಕೋವಿಡ್-19 ಹೊಡೆತಕ್ಕೆ ತತ್ತರಿಸಿ ಹೋಗಿದ್ದು, ರೈತರಿಂದ ಖರೀದಿಸುತ್ತಿರುವ ಹಾಲಿನ ದರದಲ್ಲಿ ಪ್ರತಿ ಲೀಟರ್ಗೆ 2 ರೂ. ಕಡಿತಗೊಳಿಸಿದೆ. ಲಾಕ್‌ಡೌನ್ ವೇಳೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಕುಸಿತಗೊಂಡಿರುವುದರಿಂದ ಸಂಘ ಆರ್ಥಿಕ ನಷ್ಟ ಸಮಸ್ಯೆಗೆ ಸಿಲುಕಿದೆ.
ಪ್ರಸ್ತುತ 80 ಕೋಟಿ ರೂ. ಮೌಲ್ಯದ 2,200 ಮೆಟ್ರಿಕ್ ಟನ್ ಹಾಲಿನಪುಡಿ ಹಾಗೂ 1,500 ಮೆಟ್ರಿಕ್ ಟನ್ ಬೆಣ್ಣೆ ಮಾರಾಟವಾಗದೆ ಉಳಿದಿದೆ. ಏಪ್ರಿಲ್ 2021 ಹಾಗೂ ಮೇ 2021 ರ ವರ್ಷದಲ್ಲಿ ಸಂಸ್ಥೆಗೆ 19 ಕೋಟಿ ರೂ.ನಷ್ಟವುಂಟಾಗಿದೆ. ಹೆಚ್ಚುವರಿ ಹಾಲನ್ನು ಪುಡಿಯಾಗಿ ಪರಿವರ್ತಿಸಲು ತಗಲುವ ಸಾಗಾಣಿಕೆ, ಪರಿವರ್ತನಾ ಮತ್ತು ದಾಸ್ತಾನು ವೆಚ್ಚ ಒಕ್ಕೂಟಕ್ಕೆ ಹೊರೆಯಾಗುತ್ತಿರುವುದನ್ನು ಪರಿಗಣಿಸಿ ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್ಗೆ 2 ರೂ. ಕಡಿಮೆ ಮಾಡಲು ಸರ್ವಾನುಮತದಿಂದ ತೀರ್ಮಾನಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ ತಿಳಿಸಿದರು.
ತುಮಕೂರು ಸಹಕಾರಿ ಹಾಲು ಒಕ್ಕೂಟದಲ್ಲಿ ಮೇ 2021ರ ಮಾಹೆಯ ದಿನವಹಿ ಹಾಲು ಶೇಖರಣೆ ಸರಾಸರಿ 8.19 ಲಕ್ಷ ಲೀಟರ್ ಇದ್ದು, ಪ್ರಸ್ತುತ ಒಕ್ಕೂಟದ ದಿನವಹಿ ಹಾಲು ಶೇಖರಣೆ 8.65 ಲಕ್ಷ ಕೆ.ಜಿ.ಗಳಷ್ಟಾಗಿದೆ. ಪ್ರತಿನಿತ್ಯ 4.46 ಲಕ್ಷ ಕೆ.ಜಿ ಹಾಲನ್ನು ನೇರವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳಾಗಿ ಮಾರಾಟ ಮಾಡಲಾಗುತ್ತಿದೆ. ಹೆಚ್ಚುವರಿಯಾದ 4.19 ಲಕ್ಷ ಕೆ.ಜಿ ಹಾಲನ್ನು ಹಾಲಿನ ಪುಡಿ ಮತ್ತು ಬೆಣ್ಣೆಯಾಗಿ ಪರಿವರ್ತಿಸಲಾಗುತ್ತಿದೆ.
ಇದನ್ನೂ ಓದಿ: 2ನೇ ಹಂತದ ಆರ್ಥಿಕ ಪ್ಯಾಕೇಜ್ನಲ್ಲಿ ಅಡುಗೆಯವರಿಗೂ ಪರಿಹಾರ ನೀಡಿ: ಸಿಎಂಗೆ ಮನವಿ