ತುಮಕೂರು: ತುಮಕೂರು ಜಿಲ್ಲೆಯ ಹಲವೆಡೆ ಡೆಂಘಿ, ಚಿಕೂನ್ ಗುನ್ಯಾ, ಟೈಫಾಯಿಡ್ ನಂತಹ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಜನರನ್ನು ಕಾಡುತ್ತಿವೆ.
ಹವಾಮಾನ ಬದಲಾಗುತ್ತಿದ್ದಂತೆ ಸಾಂಕ್ರಾಮಿಕ ರೋಗಗಳು ಒಂದೊಂದಾಗೇ ಎಲ್ಲೆಡೆ ಹರಡುತ್ತಿವೆ. ಸದ್ಯ ತುಮಕೂರಿನ ಸಿದ್ದಗಂಗಾ ಮಠದಲ್ಲಿಯೂ ಡೆಂಘಿ, ಟೈಫಾಯಿಡ್ ಹರಡುತ್ತಿದ್ದು, ಮಕ್ಕಳು ವಿಪರೀತ ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ಮಠದ ಆವರಣದಲ್ಲಿ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿರುವ ಲಾರ್ವ ಸರ್ವೆ ಕೂಡ ನಡೆಸಿ, ರೋಗ ಉಲ್ಬಣವಾಗದಂತೆ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಸದ್ಯ ಜಿಲ್ಲೆಯಲ್ಲಿ 5 ಡೆಂಘಿ ಪ್ರಕರಣಗಳು ಪತ್ತೆಯಾಗಿದೆ.
ಈ ಹಿನ್ನೆಲೆ ಸಿದ್ದಗಂಗಾಮಠದಲ್ಲಿರುವ ಹಾಸ್ಟೆಲ್ ಮಕ್ಕಳಿಗೆ ಹೆಚ್ಚಿನ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ತಿಳಿಸಲಾಗಿದೆ. ಅದರಲ್ಲೂ ಹೆಚ್ಚಾಗಿ ಬಿಸಿ ನೀರನ್ನು ಬಳಸುವಂತೆ ಸಲಹೆ ನೀಡಲಾಗಿದೆ. ಜೊತೆಗೆ ಟೈಫಾಯಿಡ್ ಜ್ವರದಿಂದ ಬಳಲುತ್ತಿರುವ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಜಿಲ್ಲೆಯ ಹಲವೆಡೆ ಸೊಳ್ಳೆಗಳ ನಿರ್ಮೂಲನೆಗೆ ಫಾಗಿಂಗ್ ಮಾಡಲಾಗುತ್ತಿದ್ದು, ಬೇರೆಯವರಿಗೆ ರೋಗ ಹರಡದಂತೆ ಎಚ್ಚರಿಕೆ ವಹಿಸಲಾಗಿದೆ. ಜೊತೆಗೆ ಎಲ್ಲೆಲ್ಲಿ ಜ್ವರದ ಸೋಂಕು ಕಾಣಿಸಿಕೊಳ್ಳುತ್ತಿದೆ ಅಲ್ಲೆಲ್ಲಾ ಲಾರ್ವ ಸರ್ವೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಚಂದ್ರಿಕಾ ಕೆಡಿಪಿ ಸಭೆಗೆ ಮಾಹಿತಿ ನೀಡಿದ್ದಾರೆ.