ತುಮಕೂರು: ತಿಪಟೂರು ತಾಲೂಕಿನ ರಂಗನಾಥಪುರ ಗೇಟ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ನಲ್ಲಿದ್ದ ಯುವತಿ ಮೃತಪಟ್ಟು ಯುವಕನೋರ್ವ ಗಂಭೀರ ಗಾಯಗೊಂಡಿದ್ದಾನೆ.
ಮೃತ ಯುವತಿಯನ್ನು ದ್ರಾಕ್ಷಾಯಿಣಿ 20 ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಹೊಳಲ್ಕೆರೆಗೆ ದ್ರಾಕ್ಷಾಯಿಣಿ, ಏಳುಕೋಟಿ ಎಂಬ ಯುವಕನೊಂದಿಗೆ ಬೈಕ್ನಲ್ಲಿ ತೆರಳುತ್ತಿದ್ದಳು. ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ತಲೆ ಮೇಲೆ ಲಾರಿ ಹರಿದಿದ್ದರಿಂದ ಆಕೆ ಸ್ಥಳದಲ್ಲೇ ಅಸುನೀಗಿದ್ದಾಳೆ.
ಗಾಯಗೊಂಡಿರುವ ಏಳುಕೋಟಿ ಎಂಬ ಯುವಕನನ್ನು ಚಿಕಿತ್ಸೆಗಾಗಿ ತಿಪಟೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದ್ರಾಕ್ಷಾಯಿಣಿ ಬೆಂಗಳೂರಿನ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡುತ್ತಿದ್ದಳು. ಯುವಕ ಏಳುಕೋಟಿ ಕೂಡ ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದ. ಹೊಳಲ್ಕೆರೆಯಲ್ಲಿ ನಡೆಯಲಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಬ್ಬರು ಬೈಕ್ನಲ್ಲಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅಪಘಾತ ಕುರಿತು ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.