ತುಮಕೂರು : "ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹೈಕಮಾಂಡ್ ನನಗೆ ಅವಕಾಶ ಮಾಡಿಕೊಟ್ಟಿದೆ. ಇದು ನನ್ನ ಕೊನೆಯ ಚುನಾವಣೆ ಎಂದು ಭಾವಿಸಿಕೊಂಡು ಕ್ಷೇತ್ರದಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಪ್ರವಾಸ ಕೈಗೊಳ್ಳುತ್ತೇನೆ" ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಮಧುಗಿರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಪಕ್ಷದ ಪರವಾಗಿ ರಾಜ್ಯದ ಜನರ ಒಲವಿದೆ. ಬಿಜೆಪಿ ಸರಕಾರದ ದುರಾಡಳಿತದಿಂದ ಜನರು ಬೇಸತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಸಂಪೂರ್ಣ ವಿಶ್ವಾಸವಿದೆ" ಎಂದು ಹೇಳಿದರು.
ಸತತ ಎರಡು ಬಾರಿ ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಪರಾಭವಗೊಂಡಿರುವ ರಾಜಣ್ಣ ಈ ಬಾರಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಸಿದ್ದರಾಮಯ್ಯರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಇವರಿಗೆ ಕ್ಷೇತ್ರದಲ್ಲಿ ಕುರುಬ ಸಮುದಾಯದ ಮತಗಳು ನಿರಾಯಾಸವಾಗಿ ಲಭ್ಯವಾಗಲಿದೆ ಎಂಬ ಲೆಕ್ಕಾಚಾರ ಇದೆ. ಅಲ್ಲದೇ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾಗಿರುವ ರಾಜಣ್ಣ ಕ್ಷೇತ್ರದಲ್ಲಿ ಹಲವು ಕೆಲಸಗಳನ್ನು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಸಂದರ್ಭದಲ್ಲಿ ರಾಜಣ್ಣ ಅವರು ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದರೂ ದೇವೇಗೌಡರ ಪರವಾಗಿ ಕೆಲಸ ಮಾಡದೇ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಅವರಿಗೆ ಅತಿ ಹೆಚ್ಚು ಮತಗಳನ್ನು ಕೊಡಿಸುವಲ್ಲಿ ಕೆಲಸ ಮಾಡಿದ್ದರು ಎಂಬ ಆರೋಪಗಳಿವೆ. ಕಾಂಗ್ರೆಸ್ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗೆ ಪೂರಕವಾಗಿ ಕೆಲಸ ಮಾಡಿಲ್ಲ ಎಂಬ ಆರೋಪಗಳ ನಡುವೆಯೂ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಯಾವುದೇ ರೀತಿಯಲ್ಲಿಯೂ ತಲೆಕೆಡಿಸಿಕೊಂಡಿರಲಿಲ್ಲ. ಪ್ರಸ್ತುತ ಕಾಂಗ್ರೆಸ್ ಹೈಕಮಾಂಡ್ ಮತ್ತೆ ರಾಜಣ್ಣಗೆ ಟಿಕೆಟ್ ನೀಡಿದೆ.
ಆದರೆ ರಾಜಣ್ಣ ಗೆಲುವು ಮಾತ್ರ ಅಷ್ಟು ಸುಲಭವಾಗಿಲ್ಲ. ಪ್ರಸ್ತುತ ಜೆಡಿಎಸ್ ಶಾಸಕ ವೀರಭದ್ರಯ್ಯ ಈ ಕ್ಷೇತ್ರದಲ್ಲಿ ತಮ್ಮದೇ ಆದ ಬಲ ಮುಂದುವರಿಸಿದ್ದಾರೆ. ಕ್ಷೇತ್ರದಲ್ಲಿರುವ ಕುಂಚಿಟಿಗ ಒಕ್ಕಲಿಗ ಸಮುದಾಯ ಕೂಡ ಜೆಡಿಎಸ್ ಬೆಂಬಲಿಸಲು ಮುಂದಾಗಿದ್ದಾರೆ. ಅಲ್ಲದೇ ಜೆಡಿಎಸ್ ತನ್ನದೇ ಆದ ಶಕ್ತಿಯನ್ನು ಕ್ಷೇತ್ರದಲ್ಲಿ ಹೊಂದಿದೆ ಎಂದು ಹೇಳಲಾಗುತ್ತಿದೆ. ರಾಜಣ್ಣ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿ ಕಾರುತ್ತಲೇ ಬಂದಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈಗಾಗಲೇ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಒಟ್ಟು 124 ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಡಿಕೆಶಿ, ಪರಂ ಸೇರಿದಂತೆ ಹಲವರಿಗೆ ಮೊದಲ ಹಂತದಲ್ಲಿ ಟಿಕೆಟ್ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತೇವೆ: ಸಿಎಂ ಬೊಮ್ಮಾಯಿ