ತುಮಕೂರು: ಮಾರ್ಚ್ ತಿಂಗಳಿನಿಂದ ಲಾಕ್ಡೌನ್ ಆದ ನಂತರ ನಿರಂತರವಾಗಿ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅದರಲ್ಲೂ ಬಹುಮುಖ್ಯವಾಗಿ ಕಂಟೇನ್‌ಮೆಂಟ್ ಪ್ರದೇಶಗಳಲ್ಲಿ ಎದೆಗುಂದದೆ ಕೆಲಸ ಮಾಡುತ್ತಿದ್ದಾರೆ. ಇವರ ಆರೋಗ್ಯದ ದೃಷ್ಟಿಯನ್ನು ಮುಂದಿರಿಸಿಕೊಂಡು ವಿಮೆ ಮಾಡಿಸಲಾಗಿದೆ. ಪಾಲಿಕೆಯ ವಿವಿಧ ಕಡೆಯಿಂದ 58 ಲಕ್ಷ ರೂ. ಗಳನ್ನು ಬಳಸಿಕೊಳ್ಳಲಾಗಿದೆ ಎಂದು ಮೇಯರ್ ಫರಿದಾ ಬೇಗಮ್ ತಿಳಿಸಿದರು.
ಇಎಸ್ಐ ಸೌಲಭ್ಯವನ್ನು ಬಳಸಿಕೊಳ್ಳುವ ಕುರಿತು ಕಾರ್ಮಿಕರಲ್ಲಿ ಜಾಗೃತಿ ಮೂಡಿಸಲು ಪಾಲಿಕೆ ಮುಂದಾಗಿದೆ. ಈಗಾಗಲೇ 6 ಮಂದಿ ಪೌರಕಾರ್ಮಿಕರಿಗೆ ಸೋಂಕು ತಗಲಿದ್ದು, ಅವರೆಲ್ಲರಿಗೂ ಚಿಕಿತ್ಸೆ ಕೊಡಿಸಲಾಗಿದೆ. ಅವರೆಲ್ಲರೂ ಗುಣಮುಖರಾಗಿ ಕೆಲಸಕ್ಕೆ ಹಾಜರಾಗಿದ್ದಾರೆ. ಕೊರೊನಾ ಸೋಂಕು ಹರಡುವಿಕೆ ನಡುವೆಯೂ ಕೆಲಸ ಮಾಡುತ್ತಿರುವ ಪಾಲಿಕೆಯ ನೌಕರರಿಗೆ ಧೈರ್ಯ ತುಂಬಿ ಅವರಲ್ಲಿ ಸ್ಫೂರ್ತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.